

ಹನೂರು: ಪಂಜಾಬ್ ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳವಾಡಿ ಗ್ರಾಮದ ಯೋಧ ಜ್ಞಾನಪ್ರಕಾಶ್ ಅವರ ಅಂತ್ಯಕ್ರಿಯೆ ಭಾನುವಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಜ್ಞಾನಪ್ರಕಾಶ್ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಆ.23 ರಂದು ಕರ್ತವ್ಯ ನಿರತರಾಗಿದ್ದಾಗಲೇ ಮೃತಪಟ್ಟರು. ಇವರ ಪ್ರಾರ್ಥಿವ ಶರೀರವನ್ನು ಭಾನುವಾರ ಗ್ರಾಮಕ್ಕೆ ತಂದು ಮನೆಯ ಮುಂಭಾಗ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಬಳಿಕ ಚರ್ಚ್‌ಗೆ ಕೊಂಡೊಯ್ದು ಪ್ರಾರ್ಥನೆ ಸಲ್ಲಿಸಿ ಕ್ರಿಶ್ಚಿಯನ್ ಸ್ಮಶಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸೈನಿಕರು, ಪೊಲೀಸರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.