

ಪ್ರವಿಣ್ರಾಜ್ ಕೊೖಲ ಕಡಬ
ಮಣಿಬಾಂಡ(ಸಿರಿಬಾಗಿಲು ಸರ್ಕಾರಿ ಶಾಲೆಯಿಂದ) ಪೆರುಂದೋಡಿ(ಮಲೆಮಾಕಿ) ಬಿರ್ಮೆರೆಗುಂಡಿ&ಕಟ್ಟೆ, ಕೋಟೆಗುಡ್ಡ ಸಂಪರ್ಕ ರಸ್ತೆ ಹಾಗೂ ಬಿರ್ಮೆರೆಗುಂಡಿ ಹೊಳೆಗೆ ಸೇತುವೆ ನಿರ್ಮಾಣಕ್ಕೆ 1.31 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಇಬ್ಬರು ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಸರ್ಕಾರ ಹಣ ಮಂಜೂರಾತಿಗೆ ಆದೇಶ ಮಾಡಿದೆ.
ಮಣಿಭಾಂಡ&ಪೆರುಂದೋಡಿ, ಬಿರ್ಮೆರೆಗುಂಡಿ, ಕಟ್ಟೆ, ಕೋಟೆಗುಡ್ಡೆ ಸಂಪರ್ಕ ರಸ್ತೆಗೆ 81.50 ಲಕ್ಷ ರೂ. ಅನುದಾನ ಹಾಗೂ ಬಿರ್ಮೆರೆಗುಂಡಿ ಸೇತುವೆ ರಚನೆಗೆ 50 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಗುಣವಂತ ಕಟ್ಟೆ ಹಾಗೂ ಮಂಜುನಾಥ ಎಂಬುವರು ಇಲ್ಲಿನ ನಿವಾಸಿ, ಹೈಕೋರ್ಟ್ ವಕೀಲ ಪ್ರವಿಣ್ ಕುಮಾರ್ ಕಟ್ಟೆ ಅವರ ಮೂಲಕ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಸುಮಾರು 1 ವರ್ಷ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಿಯಾ ಯೋಜನೆ ತಯಾರಿಸಿ ನ್ಯಾಯಾಲಯದಲ್ಲಿ ಸಮಸ್ಯೆ ಮುಂದುವರಿಯದಂತೆ ನೋಡಿಕೊಂಡಿದೆ. ಜಿ.ಪಂ ಇಂಜಿನಿಯರ್ ಎಸ್ಟಿಮೇಟ್ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕಾರ ಸರ್ಕಾರ ಇದೀಗ ಅನುದಾನ ಮಂಜೂರುಗೊಳಿಸಿದೆ.
ಸಾಮಾಜಿಕ ಮುಂದಾಳು ರಾಮಕೃಷ್ಣ ಹೊಳ್ಳಾರು, ಬಿರ್ಮೆರೆಗುಂಡಿ ಸೇತುವೆಯ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯರ ದೂರು ಅರ್ಜಿ ಸಮಿತಿಯ ಸದಸ್ಯ ಸುರೇಶ್ ಕುಮಾರ್ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಈ ಬಗ್ಗೆ ಕ್ರಮ ಕೈಗೊಂಡು 50 ಲಕ್ಷ ರೂ. ಹಣ ಬಿಡುಗಡೆಗೊಳಿಸುವಲ್ಲಿ ಪಾತ್ರವಹಿಸಿದ್ದಾರೆ.
ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ಮಾಡಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಕೊಂಬಾರು ಗ್ರಾಮದ ಮೆಟ್ಟುತ್ತಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ಭುವನೇಶ್ವರ ಅಮ್ಟೂರು, ವಕೀಲ ಪ್ರವಿಣ್ ಕುಮಾರ್ ಕಟ್ಟೆ ಅವರ ಮೂಲಕ ಹೈಕೋರ್ಟ್ನಲ್ಲಿ ದಾವೆ ಹೂಡಿ ಸತತ ಹೋರಾಟದ ಮೂಲಕ ಅನುದಾನ ಮಂಜೂರುಗೊಳಿಸಿದ್ದರು.
ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಮಂಜುನಾಥ ಕಟ್ಟೆ ಹಾಗೂ ಗುಣವಂತ ಕಟ್ಟೆ ಅಭಿಪ್ರಾಯ ವ್ಯಕ್ತಪಡಿಸಿ, ಒಂದು ವರ್ಷದಿಂದ ನ್ಯಾಯಾಲಯದಲ್ಲಿ ನಮ್ಮ ಊರಿನವರಾದ ಹೈಕೋರ್ಟ್ ವಕೀಲ ಪ್ರವಿಣ ಕುಮಾರ್ ಕಟ್ಟೆ ಅವರ ಮೂಲಕ ದಾವೆ ದಾಖಲಿಸಿದ್ದೆವು. ನಮ್ಮ ಭಾಗದ ಪ್ರಮುಖ ಸಮಸ್ಯೆಯಾಗಿರುವ ರಸ್ತೆ ಹಾಗೂ ಸೇತುವೆಯ ಬಗ್ಗೆ ಜನಪ್ರತಿನಿಧಿಗಳಲ್ಲಿ ವಿನಂತಿ ಮಾಡಿ ಸಾಕಾಗಿತ್ತು. ಮೆಟ್ಟುತ್ತಾರು ಸೇತುವೆ ನಿರ್ಮಾಣಕ್ಕೆ ನ್ಯಾಯಾಲಯ ಆದೇಶದ ಮೇರೆಗೆ ಅನುದಾನ ಮಂಜೂರುಗೊಂಡಿರುವುದು ನಮಗೆ ಪ್ರೇರಣೆಯಾಗಿತ್ತು. ದಾವೆ ಹೂಡಿದ ಬಳಿಕ ನ್ಯಾಯಾಲಯ ಸರ್ಕಾರಕ್ಕೆ ನೋಟೀಸು ನೀಡಿದ್ದು, ಆ ವೇಳೆಗಾಗಲೇ ಸರ್ಕಾರ ಎಸ್ಟಿಮೇಟ್ ತಯಾರಿಸಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯದೆ ರಸ್ತೆ ಮತ್ತು ಸೇತುವೆ ನಿರ್ಮಾಣದ ನಮ್ಮ ಹೋರಾಟಕ್ಕೆ ಜಯ ಸಿಕ್ಕದಂತಾಗಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈಗಾಗಲೇ ಅಂದಾಜುಪಟ್ಟಿಗೆ ಅನುಮತಿ ದೊರೆತಿದೆ. ಇನ್ನು ಕಾಮಗಾರಿಯ ಕ್ರಿಯಾಯೋಜನೆ ತಯಾರಿಸಿ, ಅನುಮತಿ ಪಡೆದುಕೊಂಡು ಟೆಂಡರ್ ಕರೆಯಬೇಕಿದೆ. ಈ ಪ್ರಕ್ರಿಯೆಗೆ ಕನಿಷ್ಠ 2 ತಿಂಗಳು ಬೇಕಾಗುತ್ತದೆ. ಶ್ರೀದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಭರತ್ ಬಿ.ಎಂ, ದ.ಕ ಜಿ.ಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಭರತ್ ಬಿ.ಎಂ, ದ.ಕ ಜಿ.ಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್