ತುರ್ತು ಕಾಮಗಾರಿಗೆ ಅನುದಾನ ಅಗತ್ಯ

gan (10)
Published on

ಕುಂದಾಪುರ: ಅನುದಾನ ವಿತರಣೆಯಲ್ಲಿ ತಾರತಮ್ಯ, ಶವಸಂಸ್ಕಾರ ಸಹಾಯಧನ ವಿತರಣೆಗೆ ಸಮಸ್ಯೆ, ಯುಜಿಡಿ ಕಾಮಗಾರಿ ಅವ್ಯವಸ್ಥೆ, ಸಾವಾನ್ಯ ಸಭೆ ನಡೆಸುವಲ್ಲಿ ವಿಳಂಬ, ರಿಕ್ಷಾ ನಿಲ್ದಾಣ ಸಮಸ್ಯೆ, ವಲಸೆ ಕಾರ್ಮಿಕರನ್ನು ತೆರವುಗೊಳಿಸಿರುವುದು, ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಮೊದಲಾದ ವಿಚಾರಗಳು ಕುಂದಾಪುರ ಪುರಸಭೆ ಸಾವಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆಯಿತು. ಕುಂದಾಪುರ ಟಿ.ಟಿ. ವಾರ್ಡ್‌ಗೆ ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯೆ ವೀಣಾ ಭಾಸ್ಕರ್, ಬೇರೆ ಬೇರೆ ವಾರ್ಡ್‌ಗಳಿಗೆ ತುರ್ತು ಕಾಮಗಾರಿಗೆ ಅನುದಾನ ಒದಗಿಸಲಾಗಿದ್ದು, ಟಿ.ಟಿ. ರಸ್ತೆ ವಾರ್ಡ್‌ಗೆ ಅನುದಾನ ನೀಡಿಲ್ಲ. ಅತಿ ತುರ್ತು ಕಾಮಗಾರಿ ಎಂದು ತಿಳಿಸಿದ್ದರೂ ಅನುದಾನ ನೀಡದೆ ವಾರ್ಡ್ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿ ಅನುದಾನ ನೀಡುವಂತೆ ಒತ್ತಾಯಿಸಿದರು. ಪರಿಶಿಷ್ಟ ಪಂಗಡದ ಕೊರಗ ಎಂಬುವರ ಶವ ಸಂಸ್ಕಾರಕ್ಕೆ ಈವರೆಗೆ ಸಹಾಯಧನ ನೀಡಿಲ್ಲ. ವ್ಯವಸ್ಥೆ ಬಗ್ಗೆ ಕಿಡಿಕಾರಿದ ಸದಸ್ಯ ಗಿರೀಶ್, ಇಂತಹ ಪ್ರಕರಣಗಳಿಗೆ ತುರ್ತು ಸ್ಪಂದನೆ ನೀಡಬೇಕು ಸಹಾಯಧನ ಬರುವ ತನಕ ಹೆಣ ಇಟ್ಟು ಕಾಯಲು ಸಾಧ್ಯವಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಗಣೇಶ ಶೇರಿಗಾರ್, ಸಂಜೀವ ಎಂಬುವರು ಮೃತಪಟ್ಟು ಒಂದು ವರ್ಷ ಕಳೆದಿದ್ದು, ಕಳೆದ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಶವಸಂಸ್ಕಾರದ ಸಹಾಯಧನ ನೀಡಲು ಅನುಮೋದನೆ ನೀಡಲಾಗಿದೆ ಎಂದರು. ಗ್ರಾಮ ಪಂಚಾಯಿತಿಗಳಲ್ಲಿ ಒಂದು ಗಂಟೆಯೊಳಗೆ ಸಹಾಯಧನ ನೀಡಲಾಗುತ್ತದೆ. ಆದರೆ ಪುರಸಭೆ, ಪಂಚಾಯಿತಿಗಿಂತ ಕಡೆಯಾಯಿತೇ ಎಂದು ಪ್ರಶ್ನಿಸಿದರು. ಯುಜಿಡಿ ಕಾಮಗಾರಿಗಳ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಗಿರೀಶ್, ಯುಜಿಡಿ ಕಾಮಗಾರಿ ಪ್ರಾರಂಭವಾಗಿ ಅನೇಕ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಹಾಕಿದ ಪೈಪ್‌ಗಳೆಲ್ಲ ತುಕ್ಕು ಹಿಡಿದು ಬಿದ್ದಿದೆ. ಮಂಗಲಪಾಂಡೆ ರಸ್ತೆ ಮತ್ತು ಟಿ.ಟಿ. ರಸ್ತೆಯಲ್ಲಿ ಮಿನಿ ಎಸ್‌ಟಿಪಿ ವಾಡುವ ಪ್ರಸ್ತಾವನೆ ಏನಾಗಿದೆ ಎಂದು ಪ್ರಶ್ನಿಸಿದ ಅವರು ಯುಜಿಡಿ ಅಧಿಕಾರಿಗಳು ಪುರಸಭೆಗೆ ಈವರೆಗೆ ಯಾವುದೇ ಸರಿಯಾದ ವಾಹಿತಿ ನೀಡುತ್ತಿಲ್ಲ, ಸಂಬಂಧಪಟ್ಟ ಯಾರೂ ಸ್ಪಂದನೆ ವಾಡುತ್ತಿಲ್ಲ. ಯುಜಿಡಿ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾಗಿದ್ದು, ಈ ಬಗ್ಗೆ ವಿಶೇಷ ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಶಾಸ್ತ್ರೀ ವೃತ್ತದ ್ಲೈಓವರ್ ಕೆಳಗೆ ಮಲಗುತ್ತಿದ್ದ ವಲಸೆ ಕಾರ್ಮಿಕರನ್ನು ತೆರವುಗೊಳಿಸಿರುವುದನ್ನು ಪ್ರಸ್ತಾಪಿಸಿದ ಸದಸ್ಯ ಗಿರೀಶ್, ವಲಸೆ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು. ಬರೆಬೆಟ್ಟು ತೋಡು ಕುಸಿದು ಒಂದು ವರ್ಷವಾದರೂ ದುರಸ್ತಿಗೆ ಮಾಡದಿರುವ ಬಗ್ಗೆ ಪ್ರಶ್ನಿಸಿದ ಗಿರೀಶ್, ಕಾಲೇಜು ರಸ್ತೆಯಲ್ಲಿ ಜನರು ಓಡಾಡಲು ಕಷ್ಟವಾಗುತ್ತಿದೆ. ಅಂಗಡಿಗಳೆಲ್ಲ ರಸ್ತೆಗೆ ಬರುತ್ತಿದೆ ಎಂದು ಆರೋಪಿಸಿದರು. ಪುರಸಭೆ ಲೆಕ್ಕಾಧಿಕಾರಿ ವಿರುದ್ಧ ಗರಂ ಆದ ಸದಸ್ಯ ಶ್ರೀಧರ ಶೇರಿಗಾರ್, ಲೆಕ್ಕಾಧಿಕಾರಿ ಅವರಿಗೆ ಜಾತಿ ಅಭಿವಾನ ಹೆಚ್ಚಾಗಿದೆ. ಅವರಿಗೆ ಪುರಸಭೆ ಸದಸ್ಯರು, ಸಾರ್ವಜನಿಕರು ಬೇಡವಗಿದ್ದಾರೆ. ಲಕ್ಷಾಂತರ ರೂ. ದುಡ್ಡು ಹೊಡೆದಿದ್ದಾರೆ. ಅವರೊಬ್ಬ ಮೋಸಗಾರ, ಇಂತಹ ಲೆಕ್ಕಾಧಿಕಾರಿ ಪುರಸಭೆಯಲ್ಲಿ ಕೆಲಸ ವಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿನ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಿಸಿ ಕುಂದಾಪುರದ ಅಂದ ವಿರೂಪಗೊಳಿಸಿದ್ದಾರೆ ಎಂದು ಸದಸ್ಯ ದೂರಿದರು. ಇದಕ್ಕೆ ಉತ್ತರಿಸಿದ ಸದಸ್ಯ ಸಂತೋಷ ಶೆಟ್ಟಿ ಮೇಲ್ಛಾವಣಿ ನಿರ್ಮಿಸಿರುವುದರಿಂದ ಯಾವುದೇ ತೊಂದರೆಯಾಗಿಲ್ಲ ಎಂದರು. ವೆಸ್ಟಬ್ಲಾಕ್ ರಸ್ತೆಯಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕೆಂದು ಸದಸ್ಯ ಅಬು ಮೊಹಮ್ಮದ್ ಒತ್ತಾಯಿಸಿದರು. ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಮುಖ್ಯಾಧಿಕಾರಿ ಆನಂದ್ ಜೆ.ಉಪಸ್ಥಿತರಿದ್ದರು.

ಸಮಸ್ಯೆಗೆ ಇದೇ ಕಾರಣ

ಸಾವಾನ್ಯ ಸಭೆ ನಡೆಸಲು ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಸದಸ್ಯ ಚಂದ್ರಶೇಖರ ಖಾರ್ವಿ, ಪ್ರತಿ ತಿಂಗಳು ಸಾವಾನ್ಯ ಸಭೆ ನಡೆಸಿದರೆ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತಿತ್ತು. ತಿಂಗಳಿಗೊಮ್ಮೆ ಸಾವಾನ್ಯ ಸಭೆ ನಡೆಸಲು ಸಮಸ್ಯೆ ಏನು? ಸಮಸ್ಯೆ ಬಿಗಡಾಯಿಸಲು ಇದೇ ಕಾರಣ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net