

ಬದಿಯಡ್ಕ: ನಾಡಿನ ಎಲ್ಲ ದೇವಸ್ಥಾನಗಳ ಸುತ್ತಮುತ್ತ ನಿರ್ಮಲವಾಗಿರಬೇಕು ಎನ್ನುವ ಆಶಯವು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ನೀತಿ ಆಗಿದೆ. ಸಂಘಟನೆ ಮೂಲಕ ಸಮಗ್ರ ಪ್ರಗತಿಯಾಗಬೇಕು ಎಂಬುದಕ್ಕಾಗಿ ಸಮುದಾಯ ಅಭಿವೃದ್ಧಿ ವಿಭಾಗ ಇದೆ. ದೇವಸ್ಥಾನಗಳ ಅಭಿವೃದ್ಧಿಗಾಗಿ ಧರ್ಮೋತ್ಥಾನ ಟ್ರಸ್ಟ್ ಇದೆ. ಹೀಗೆ ಶ್ರೀ ಕ್ಷೇತ್ರದ ಸಮಾಜಮುಖಿ ಆರ್ಥಿಕ ನೆರವು ಪ್ರಸಾದ ರೂಪದಲ್ಲಿ ಬಂದಾಗ ಅದು ಬೃಹತ್ ವೇಗವರ್ಧಕವಾಗಿ ಧ್ಯೇಯೋದ್ದೇಶಗಳ ಪ್ರಗತಿಗೆ ನೆರವಾಗುವುದನ್ನು ನಾವು ಕಾಣಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ತಿಳಿಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಲಾದ ಧನಸಹಾಯ 3 ಲಕ್ಷ ರೂ.ಡ್ರಾಫ್ಟನ್ನು ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶಾಮ ಭಟ್ಟರಿಗೆ ಬುಧವಾರ ಹಸ್ತಾಂತರಿಸಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್, ಖಜಾಂಜಿ ವೈ.ವಿ.ಸುಬ್ರಹ್ಮಣ್ಯ, ಹಿರಿಯರಾದ ಪತ್ತಡ್ಕ ಗಣಪತಿ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ಸಂಚಾಲಕಿ ಜಯಶ್ರೀ, ಈಳಂತೋಡಿ ಒಕ್ಕೂಟದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಪುತ್ರಕಳ, ಸೇವಾ ಪ್ರತಿನಿಧಿ ಲಾವಣ್ಯ ಪಡಿಕ್ಕಲ್ಲು ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ ಶಿವಸ್ತುತಿ ಪ್ರಾರ್ಥನೆ ಹಾಡಿದರು. ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ವಂದಿಸಿದರು.