

ಮಂಜೇಶ್ವರ: ತಲಪಾಡಿ ಟೋಲ್ಗೇಟ್ ಆರಂಭದಲ್ಲಿ ಕೇರಳ-ಕರ್ನಾಟಕದ ಸ್ಥಳೀಯ 5 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ಟೋಲ್ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ ರದ್ದುಪಡಿಸಿ ಈ ಭಾಗದಿಂದ ತೆರಳುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ಆದರೆ ಈ ಬಗ್ಗೆ ತಡವಾಗಿಯಾದರೂ ಎಚ್ಚೆತ್ತುಕೊಂಡ ಸ್ಥಳೀಯರು, ತಮಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ಟೋಲ್ ಗೇಟ್ ಕ್ರಿಯಾ ಸಮಿತಿಯನ್ನು ರಚಿಸಿ ಹೆದ್ದಾರಿ ಪ್ರಾಧಿಕಾರ, ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಹಲವು ಸಲ ಮನವಿ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಟೋಲ್ಗೇಟ್ ಕ್ರಿಯಾ ಸಮಿತಿ ಸ್ಥಳೀಯರನ್ನು ಒಗ್ಗೂಡಿಸಿ ಇದೀಗ ಹೋರಾಟಕ್ಕೆ ಸಜ್ಜಾಗಿದೆ.
ಬುಧವಾರ ಕ್ರಿಯಾ ಸಮಿತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಕನ್ವೀನರ್ ಹಾಗೂ ವಾರ್ಡ್ ಸದಸ್ಯ ಅಬ್ದುಲ್ ರಹೀಂ ವಿಷಯ ಮಂಡಿಸಿದರು.
ಸ್ಥಳೀಯರಿಗೆ ಆಗಿರುವ ಅನ್ಯಾಯ ವಿರುದ್ಧ ತಲಪಾಡಿ ಟೋಲ್ಗೇಟ್ ಪರಿಸರದಲ್ಲಿ ಜ.8ರಂದು ಸಂಜೆ 4 ಗಂಟೆಗೆ ಸೂಚನಾ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅಧಿಕಾರಿಗಳಿಂದ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ಲಭಿಸದೆ ಇದ್ದಲ್ಲಿ ನ್ಯಾಯ ಲಭಿಸುವವರೆಗೆ ಹೋರಾಟ ಮುಂದುವರಿಸಲು ಸೇರಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸ್ಥಳೀಯರು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ ನೇತಾರರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.