3ರಿಂದ ರಾಜ್ಯದಲ್ಲಿ ಮಳೆ ಬಿರುಸು: ಮಲೆನಾಡು, ಕರಾವಳಿಯಲ್ಲಿ ಜೋರು

rain
Published on

ಬೆಂಗಳೂರು:ರಾಜ್ಯದ ಹಲವೆಡೆ ತಗ್ಗಿರುವ ಮಳೆ, ಕರಾವಳಿ,ಮಲೆನಾಡು ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಕೆಲ ಜಿಲ್ಲೆಗಳಲ್ಲಿ ಜು.3ರಿಂದ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.3ರಿಂದ ಜು.7ರವರೆಗೆ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಜು.4ರಿಂದ ಮುಂದಿನ 3 ದಿನ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ ಕರಾವಳಿ ಭಾಗದ ಕೆಲ ಪ್ರದೇಶಗಳಲ್ಲಿ ಗಂಟೆಗೆ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಮುಂದಿನ 6 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣವಾಗಿ ಸುರಿಯಲಿದೆ. ಈ ವೇಳೆ ಕೆಲ ಪ್ರದೇಶಗಳಲ್ಲಿ ಮಳೆಗಿಂತ ಗಾಳಿ ವೇಗವೂ ಇರಲಿದೆ.

ವಾಡಿಕೆಯಷ್ಟೇ ಮಳೆ: ರಾಜ್ಯದಲ್ಲಿ ಪ್ರಸಕ್ತ ತಿಂಗಳು ವಾಡಿಕೆಯಷ್ಟೇ ಮಳೆಯಾಗಿದೆ. ಜೂ.1ರಿಂದ ಜೂ.30ರವರೆಗೆ ರಾಜ್ಯಾದ್ಯಂತ 199 ಮಿಮೀ ಮಳೆಯಾಗಬೇಕಿತ್ತು. ಆದರೆ, 203 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.2 ಹೆಚ್ಚು ಬಿದ್ದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದರೆ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆ ಕುಂಠಿತವಾಗಿದೆ. 83 ತಾಲೂಕಿನಲ್ಲಿ ಸಾಧಾರಣ, 20 ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net