ಸರ್ಕಾರದಿಂದ ಮುಂಗಾರು ಹಬ್ಬ ಆಯೋಜನೆ

MUNJOOR
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಎತ್ತುಗಳಿಂದ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಸಚಿವ ಎನ್.ಎಸ್.ಬೋಸರಾಜು ಸೋಮವಾರ ಚಾಲನೆ ನೀಡಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಪ್ರಮುಖರಾದ ಶ್ರೀನಿವಾಸರೆಡ್ಡಿ, ಯು.ಲಿಂಗಾರೆಡ್ಡಿ, ಚಂದ್ರಶೇಖರ ರೆಡ್ಡಿ, ಯು.ಗೋವಿಂದರೆಡ್ಡಿ ಇದ್ದರು.
Published on

ರಾಯಚೂರು: ಮುನ್ನೂರು ಕಾಪು ಸಮಾಜ 23 ವರ್ಷಗಳಿಂದ ನಿರಂತರವಾಗಿ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯವಾಗಿದೆ. ಮುಂದಿನ ವರ್ಷದಿಂದ ಸರ್ಕಾರದಿಂದ ಹಬ್ಬ ಆಚರಣೆಗೆ ಪ್ರಯತ್ನಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.

ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಎತ್ತುಗಳಿಂದ ಎರಡೂವರೆ ಟನ್ ಕಲ್ಲು ಎಳೆಯುವ ಅಖಿಲ ಭಾರತ ಮಟ್ಟದ ಸ್ಪರ್ಧೆಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

ಮುಂಗಾರು ರೈತರ ಹಬ್ಬವಾಗಿದ್ದು, ಹಬ್ಬವನ್ನು ರೈತರು ಸಂತೋಷದಿಂದ ಆಚರಿಸುವಂತೆ ಮಾಡುವ ಕೆಲಸವನ್ನು ಮುನ್ನೂರು ಕಾಪು ಸಮಾಜ ಮಾಡುತ್ತಿದೆ. ಸರ್ಕಾರದಿಂದ ಒಂದು ರೂಪಾಯಿ ಕೂಡಾ ಪಡೆಯದೇ ಅದ್ದೂರಿಯಾಗಿ ಆಚರಿಸುತ್ತಿರುವುದು ಸಾಮಾನ್ಯದ ವಿಷಯವಲ್ಲ ಎಂದರು.

ಮುನ್ನೂರು ಕಾಪು ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠವಾಗಿದ್ದು, ಹಬ್ಬದ ಮೂಲಕ ರಾಜ್ಯವೇ ಜಿಲ್ಲೆಯನ್ನು ಗುರುತಿಸುವಂತಹ ಕೆಲಸ ಮಾಡುತ್ತಿದೆ ಎಂದು ಸಚಿವ ಬೋಸರಾಜು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ದೇಶ ಮತ್ತು ರಾಜ್ಯಕ್ಕೆ ಚಿನ್ನ, ಅನ್ನ ಕೊಡುವ ರಾಯಚೂರು ಜಿಲ್ಲೆ ಕೃಷಿಯಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. ಕೃಷಿಕರ ಹಬ್ಬವಾದ ಮುಂಗಾರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮುಂಗಾರು ಸಾಂಸ್ಕೃತಿಕ ಹಬ್ಬ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಕೃಷಿಯನ್ನು ಮೂಲ ಕಸುಬಾಗಿ ಮಾಡಿಕೊಂಡಿರುವ ಮುನ್ನೂರು ಕಾಪು ಸಮಾಜ, ಇತರ ಸಮಾಜದ ಜನರೊಂದಿಗೆ ಬೆರೆತು ಬಾಳುವ ಸಮಾಜವಾಗಿದೆ ಎಂದು ಹೇಳಿದರು. ಚಿಕ್ಕಸುಗೂರು ಚೌಕಿಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ರೈಸ್‌ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಪ್ರಮುಖರಾದ ಮಾರಂ ತಿಪ್ಪಣ್ಣ, ಕೃಷ್ಣಮೂರ್ತಿ, ಗಧಾರ್ ಬೆಟ್ಟಪ್ಪ, ರಾಜಕುಮಾರ, ವಿ.ಲಕ್ಷ್ಮೀರೆಡ್ಡಿ ಇದ್ದರು.

ಪ್ರಾಬಲ್ಯ ಮೆರೆದ ಆಂಧ್ರದ ಎತ್ತುಗಳು

ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ಎತ್ತುಗಳು ಪ್ರಾಬಲ್ಯ ಮೆರೆದವು. ಆಂಧ್ರದ ಕರ್ನೂಲ್ ಜಿಲ್ಲೆಯ ಯಾದರೆಡ್ಡಿ ಗ್ರಾಮದ ಅಖಿಲೇಶರೆಡ್ಡಿ ಅವರ ಎತ್ತುಗಳು ಕಲ್ಲನ್ನು 2,451 ಅಡಿ ದೂರ ಎಳೆಯುವ ಮೂಲಕ ಪ್ರಥಮ ಬಹುಮಾನ 90 ಸಾವಿರ ರೂ. ಪಡೆದುಕೊಂಡವು.

ನಂದ್ಯಾಲ ಜಿಲ್ಲೆ ಪಿ.ಆರ್.ಪಲ್ಲೇಂ ಗ್ರಾಮದ ಎಂ.ನಾಗಯ್ಯ ಅವರ ಎತ್ತುಗಳು ಕಲ್ಲನ್ನು 2,234 ಅಡಿ ದೂರ ಎಳೆದು ದ್ವಿತೀಯ ಬಹುಮಾನ 75 ಸಾವಿರ ರೂ. ಪಡೆದುಕೊಂಡವು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ನದರಗುಲ್ಲಾ ಗ್ರಾಮದ ಎಲ್.ಪ್ರಸನ್ನರೆಡ್ಡಿ ಅವರ ಎತ್ತುಗಳು ಕಲ್ಲನ್ನು 2,163 ಅಡಿ ದೂರ ಎಳೆದು ತೃತೀಯ ಬಹುಮಾನ 65 ಸಾವಿರ ರೂ. ಗದ್ವಾಲ್ ಜಿಲ್ಲೆ ಚಲ್ಲಗರ್ಲಪಾಡು ಗ್ರಾಮದ ಎನ್.ರಾಮಾಂಜನೇಯಲು ಅವರ ಎತ್ತುಗಳು ಕಲ್ಲನ್ನು 1,844 ಅಡಿ ದೂರ ಎಳೆದು ನಾಲ್ಕನೇ ಬಹುಮಾನ 55 ಸಾವಿರ ರೂ. ಪಡೆದುಕೊಂಡವು.

ಗದ್ವಾಲ್ ಜಿಲ್ಲೆ ಕಂಚುಪಾಡು ಗ್ರಾಮದ ಸುಧಾಕರ್ ರೆಡ್ಡಿ ಎತ್ತುಗಳು ಕಲ್ಲನ್ನು 1,807 ಅಡಿ ದೂರ ಎಳೆದು 5ನೇ ಬಹುಮಾನ 45 ಸಾವಿರ ರೂ., ದೇವಪಾಂಡ ಗ್ರಾಮದ ಭಾಸ್ಕರರೆಡ್ಡಿ ಅವರ ಎತ್ತುಗಳು ಕಲ್ಲನ್ನು 1,800 ಅಡಿ ದೂರ ಎಳೆದು 6ನೇ ಬಹುಮಾನ 35 ಸಾವಿರ ರೂ. ಪಡೆದುಕೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net