More

    ರೈತರ ಕೃಷಿಗೆ ಮುನ್ನುಡಿ ಬರೆಯುವ ಹಬ್ಬ

    ಸಿಂಧನೂರು: ಪ್ರಕೃತಿಯೇ ತೋರಣ ಕಟ್ಟಿ ಸ್ವಾಗತಿಸುವ ಹಬ್ಬ ಯುಗಾದಿಯಾಗಿದ್ದು, ಅರ್ಥಪೂರ್ಣವಾಗಿ ಆಚರಿಸುವತ್ತ ಹೆಜ್ಜೆ ಇಡಬೇಕೆಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಸ್ವಾಮೀಜಿ ಹೇಳಿದರು.

    ನಗರದ ಸತ್ಯಗಾರ್ಡನ್‌ನಲ್ಲಿ ಯುಗಾದಿ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ಯುಗಾದಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಬುಧವಾರ ಮಾತನಾಡಿದರು.

    ಭಾರತ ಬಹು ಸಂಸ್ಕೃತಿಗಳ ತವರೂರು ಆಗಿದ್ದು, ಹಬ್ಬಗಳಲ್ಲಿ ಯುಗಾದಿಗೆ ವಿಶೇಷ ಸ್ಥಾನವಿದೆ. ವಸಂತ ಋತುವಿನ ಚೈತ್ರಮಾಸದಲ್ಲಿ ಮೈತಳೆದು ಬರುವ ಚಂದ್ರಮಾನ ಯುಗಾದಿಯು, ಇಡೀ ಸೃಷ್ಟಿಯಲ್ಲಿ ಹೊಸತನ್ನು ತುಂಬುವ ಹಬ್ಬವಾಗಿದೆ. ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಇಡೀ ಜಗತ್ತಿಗೆ ಸಾರುವ ಭಾರತ ದೇಶದಲ್ಲಿ ಯುಗಾದಿಯನ್ನು ಸಡಗರದಿಂದ ಆಚರಿಸುತ್ತಾರೆ. ಇದು ರೈತರ ಕೃಷಿಗೆ ಮುನ್ನುಡಿ ಬರೆಯುವ ಹಬ್ಬವಾಗಿದೆ ಎಂದರು.

    ಸಾಹಿತಿ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಯುಗಾದಿ ಸಾಮಾಜಿಕ ಮಹತ್ವವನ್ನು ಹೊಂದಿದ್ದು, ಬೇವು-ಬೆಲ್ಲವು ಮನುಷ್ಯನ ಸುಖ-ದು:ಖಗಳ ಸಂಕೇತವಾಗಿದೆ. ಏರಿಳಿತಗಳ ಬದುಕಿನಲ್ಲಿ ನೋವು ನಲಿವಿನ ಸಮ ಮಿಶ್ರಣವೇ ಬದುಕಿನ ಸಾರವೆಂಬ ನೆಲೆಯಲ್ಲಿ ಬೇವು-ಬೆಲ್ಲವನ್ನು ಸೇವಿಸಲಾಗುತ್ತದೆ. ಆಧುನಿಕತೆಯ ವ್ಯಾಮೋಹಕ್ಕೆ ಬಲಿಯಾಗಿರುವ ಇಂದಿನ ಜನಾಂಗ ಹಬ್ಬಗಳ ಮಹತ್ವ ಅರಿಯಬೇಕೆ ಎಂದರು.

    ಸ್ವಾಮಿ ವಿವೇಕಾನಂದ ಆಶ್ರಮದ ಸದಾನಂದ ಸ್ವಾಮೀಜಿ, ಸಮಿತಿ ಸಂಚಾಲಕ ವೈ.ನರೇಂದ್ರನಾಥ ಮಾತನಾಡಿದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಸಾಹಿತಿ ಡಾ.ಶರಣಬಸಪ್ಪ ಕೋಲ್ಕಾರ್ ಅವರಿಗೆ ಕಲ್ಯಾಣ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಉದ್ಯಮಿ ರಾಜೇಶ ಹಿರೇಮಠ, ಆಚರಣೆ ಸಮಿತಿ ಸಂಚಾಲಕರಾದ ಎಂ.ಭಾಸ್ಕರ್, ಸರಸ್ವತಿ ಪಾಟೀಲ್, ವೆಂಕನಗೌಡ ವಟಗಲ್, ಮುರುಳಿಕೃಷ್ಣ, ಡಾ.ಚನ್ನನಗೌಡ ಪಾಟೀಲ್, ಕಮ್ಮಾ ರಾಮಕೃಷ್ಣ, ವಿ.ಸಿ. ಪಾಟೀಲ್, ಶಿವಾ, ಬೀರಪ್ಪ ಶಂಭೋಜಿ ಇತರರಿದ್ದರು. ಹೇಮಲತಾ ಜೋಳದರಾಶಿ ನಿರೂಪಿಸಿದರು. ಅನ್ನಪೂರ್ಣ ಹೇಮವಾಡಗಿ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts