More

    ಉತ್ತಮ ಮಳೆ ನಿರೀಕ್ಷೆಯಲ್ಲಿ ಕೃಷಿಕರು

    ಹೊಸಪೇಟೆ: ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ರೈತರು ಹೊಲ-ಗದ್ದೆಗಳಲ್ಲಿ ಭೂಮಿ ಹದಗೊಳಿಸಲು ಮುಂದಾಗಿದ್ದಾರೆ.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ರೈತರಲ್ಲಿ ಭರವಸೆ ಮೂಡಿಸಿದ್ದು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಮಳೆಯಾಗದೆ ರೈತರು ಚಿಂತೆಗೀಡಾಗಿದ್ದರು. ಈ ಬಾರಿ ಬಿತ್ತನೆಗೆ ಸರಿಯಾದ ಸಮಯದಲ್ಲಿ ಮಳೆಯಾಗುವ ಆಶಾಭಾವ ಹೊಂದಿರುವ ರೈತರು ಮೇ ಅಥವಾ ಮುಂಬರುವ ತಿಂಗಳಲ್ಲಿ ಉತ್ತಮ ವರ್ಷಧಾರೆಯಾಗಬಹುದು ಎಂಬ ನಂಬಿಕೆಯಲ್ಲಿದ್ದಾರೆ.

    ಹತ್ತು ಎಕರೆಗೂ ಹೆಚ್ಚು ಜಮೀನು ಹೊಂದಿರುವ ರೈತರು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದರೆ, 4-5 ಎಕರೆ ಜಮೀನಿನವರು ರಾಸುಗಳನ್ನು ಕಟ್ಟಿಕೊಂಡು ಉಳುಮೆ ಮಾಡುತ್ತಿದ್ದಾರೆ. ಮೇನಲ್ಲಿ ವಾಡಿಕೆ ಮಳೆ ಆಗಬೇಕು. ಕೃಷಿಗೆ ಬೇಕಾಗುವ ಮಳೆ ಬೀಳುವ ನಿರೀಕ್ಷೆಯಲ್ಲಿರುವ ರೈತರು ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ. ಬಿತ್ತನೆಗೆ ಬೇಕಾಗಿರುವ ಸಿದ್ಧತೆಗಳನ್ನು ಕೈಗೊಂಡಿದ್ದು, ಜೋಳ, ರಾಗಿ, ಮೆಕ್ಕೆಜೋಳ, ಅವರೆ, ತೊಗರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲು ರಸಗೊಬ್ಬರಗಳ ಶೇಖರಣೆ ಮಾಡಿಕೊಂಡಿದ್ದಾರೆ. ಬರಪೀಡಿತ ವಿಜಯನಗರ ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ಕೈಕೊಟ್ಟಿದ್ದು, ಕೃಷಿ ಮಾಡಲು ರೈತರಿಗೆ ನೀರಿನ ತೊಂದರೆ, ವಿದ್ಯುತ್ ಸಮಸ್ಯೆ ಎದುರಾಗಿತ್ತು. ನೂರಾರು ಅಡಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ.

    ಮೋಡ ಕವಿದ ವಾತಾವರಣ ನಿರ್ಮಾಣ

    ಹೊಸಪೇಟೆ ನಗರ ಸೇರಿದಂತೆ ಜಿಲ್ಲಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣ ಶನಿವಾರ ಕಂಡುಬಂತು. ದಿನವಿಡೀ ತಂಪು ವಾತಾವರಣವಿತ್ತು. ಬೆಳಗಿನ ಜಾವ ಅಲ್ಲಲ್ಲಿ ತುಂತುರು ಮಳೆಯೂ ಸುರಿಯಿತು. ಹೆಚ್ಚಿನ ಕಡೆಗಳಲ್ಲಿ ಸೂರ್ಯನ ದರ್ಶನವೇ ಆಗಿಲ್ಲ. ಹೀಗಾಗಿ ಶುಕ್ರವಾರದ ವರೆಗಿದ್ದ ಸುಡುಬಿಸಿಲಿನ ವಾತಾವರಣ ಇದ್ದಕ್ಕಿಂದ್ದಂತೆ ತಂಪಾಗಿ ಬದಲಾಗಿದೆ. ಶನಿವಾರ ಉಷ್ಣಾಂಶ ಕನಿಷ್ಠ 26 ರಿಂದ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಿಸಿಲಿನ ತಾಪಕ್ಕೆ ಬೆಂಡಾಗಿದ್ದ ಜನರು, ವಾತಾವರಣ ತಂಪಾಗಿದ್ದರಿಂದ ನಿರಾಳವಾಗಿ ಓಡಾಡಿದರು.

    ಕಳೆದ ಬಾರಿ ಮಳೆ-ಬೆಳೆ ಇಲ್ಲದೆ ಸಂಕಷ್ಟ ಅನುಭವಿಸಿದ್ದ ರೈತರಿಗೆ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಜಮೀನು ಹದಗೊಳಿಸುವ ಕಾರ್ಯ ನಡೆದಿದೆ. ಮುಂಗಡವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಗುಣಮಟ್ಟದ ಬಿತ್ತನೆ ಬೀಜ ಗೊಬ್ಬರ ವಿತರಣೆ ಮಾಡಬೇಕು.
    | ಎಚ್.ಜೆ.ಮಲ್ಲಿಕಾರ್ಜುನ ರೈತ ಮುಖಂಡ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts