

ಬೆಂಗಳೂರು: ಮಠದಹಳ್ಳಿ ಸಮೀಪದ ಮೋತಿನಗರದಲ್ಲಿ ಮೇ 6ರಂದು ನಡೆದಿದ್ದ ಕಿಶೋರ್ (28) ಕೊಲೆ ಪ್ರಕರಣ ಸಂಬಂಧ ಆರ್.ಟಿ. ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ರಾಜೇಶ್ ಕುಮಾರ್ (32) ಮತ್ತು ಒಡಿಶಾ ಮೂಲದ ಸುಜಿತ್ ಕುಮಾರ್ ಸ್ವೇನ್ (30) ಬಂಧಿತರು. ಮೂವರೂ ಸ್ನೇಹಿತರಾ ಗಿದ್ದರು. ತಾಯಿ, ಸಹೋದರಿಯಿಂದ ದೂರನಾಗಿದ್ದ ಕಿಶೋರ್ ಕೆಲಸಕ್ಕೆ ಹೋಗದೆ ಸ್ನೇಹಿತರ ಜೊತೆ ವಾಸವಾಗಿದ್ದ.
ಆರ್.ಟಿ. ನಗರದಲ್ಲಿ ವಾಸಿಸುತ್ತಿದ್ದ ರಾಜೇಶ್ ಹೋಟೆಲ್ನಲ್ಲಿ ಬಾಣಸಿಗನಾಗಿದ್ದ. ಯಲಹಂಕದ ಅಲ್ಲಾಳಸಂದ್ರದಲ್ಲಿ ವಾಸಿಸುತ್ತಿದ್ದ ಸುಜಿತ್ ಫುಡ್ ಡೆಲಿವರಿ ಬಾಯ್ ಆಗಿದ್ದ. ಕರೊನಾ ಲಾಕ್ಡೌನ್ನಿಂದ ಬಂದ್ ಆಗಿದ್ದ ಮದ್ಯದ ಅಂಗಡಿಗಳು ತೆರೆದ ಹಿನ್ನೆಲೆಯಲ್ಲಿ ಮೇ 6ರ ರಾತ್ರಿ ರಾಜೇಶ್ ಮನೆಯಲ್ಲಿ ಕಿಶೋರ್ ಮತ್ತು ಸುಜಿತ್ ಮದ್ಯದ ಪಾರ್ಟಿ ಏರ್ಪಡಿಸಿದ್ದರು. ಮರುದಿನ ಬೆಳಗ್ಗೆ ಮತ್ತೆ ಮದ್ಯ ತರಲು ಕಿಶೋರ್ ಹಣ ಕೇಳಿದ್ದ. ಸ್ನೇಹಿತರು ಹಣ ಇಲ್ಲವೆಂದು ಹೇಳಿದಾಗ ದೇವರ ಮನೆಯಲ್ಲಿದ್ದ ಹುಂಡಿಯ ಹಣ ತೆಗೆದು ಮದ್ಯ ತರುವುದಾಗಿ ಕಿಶೋರ್ ಹೇಳಿದ್ದಾನೆ.
ಆಗ ಕೋಪಗೊಂಡ ರಾಜೇಶ್, ನನ್ನ ದೇವರ ಮನೆಯ ಹುಂಡಿ ತೆಗೆಯಲು ನಿನ್ಯಾರು ಎಂದು ಪ್ರಶ್ನಿಸಿದ್ದ. ಆದರೂ ಪಟ್ಟು ಬಿಡದೆ ಮದ್ಯ ತರುವುದಾಗಿ ಕಿಶೋರ್ ಹೇಳಿದಾಗ ಇಬ್ಬರ ನಡುವೆ ಜಗಳವಾಗಿದೆ. ಕೆರಳಿದ ರಾಜೇಶ್, ಚಾಕುವಿನಿಂದ ಕಿಶೋರ್ ಮೇಲೆ ಹಲ್ಲೆ ನಡೆಸಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಬಿಟ್ಟರೆ ಪೊಲೀಸರಿಗೆ ಮಾಹಿತಿ ಕೊಡುತ್ತಾನೆಂದು ಸುಜಿತ್, ಅದೇ ಚಾಕುವಿನಿಂದ ಕಿಶೋರ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದ. ಬಳಿಕ ಇಬ್ಬರೂ ಲಗೇಜ್ ತೆಗೆದುಕೊಂಡು ವಲಸೆ ಕಾರ್ವಿುಕರ ಸೋಗಿನಲ್ಲಿ ಸರಕು ಸಾಗಣೆ ವಾಹನದಲ್ಲಿ ಉತ್ತರ ಭಾರತದ ಕಡೆಗೆ ಸಾಗುತ್ತಿದ್ದರು.
ಇದನ್ನೂ ಓದಿ: ಹೂಡಿಕೆ ಆಕರ್ಷಣೆಗೆ ‘ಟ್ಯಾಕ್ಸ್ ಹಾಲಿಡೆ?’
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಮೊಬೈಲ್ ಸಿಗ್ನಲ್ ಆಧರಿಸಿ ಬೆನ್ನತ್ತಿ ತೆಲಂಗಾಣದ ವಾರಂಗಲ್ನಲ್ಲಿ ಬಂಧಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿ ಮೇ 14ರವರೆಗೆ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಆರೋಪಿಗಳ ಕೋವಿಡ್-19 ಪರೀಕ್ಷೆಗೆ ಗಂಟಲ ದ್ರವ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.