

ಹಾಸನ: ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ (94) ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯೋಸಹಜ ಕಾಯಿಲೆಯಿಂಬ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಬುಧವಾರ ಚನ್ನರಾಯಪಟ್ಟಣ ತಾಲೂಕಿನ ಬಳದರೆ ಸಮೀಪದ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಎಚ್.ಎಂ.ಶಿವಣ್ಣ ಅವರು, ಸ್ವಾತಂತ್ರೃ ಹೋರಾಟದ ವೇಳೆ ಪರಿಚಿತರಾದ ಹಾಸನ ಕ್ಷೇತ್ರದ ಮಾಜಿ ಶಾಸಕಿ ದಿ.ಯಶೋಧರಾ ದಾಸಪ್ಪ ಅವರೊಂದಿಗೆ ಹಾಸನಕ್ಕೆ ಆಗಮಿಸಿ, ಕಳೆದ 7 ದಶಕಗಳಿಂದ ಜಿಲ್ಲೆಯಲ್ಲೇ ನೆಲೆಸಿದ್ದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಗುಂಡ್ಲುಪೇಟೆಯಲ್ಲಿ ಪಡೆದರು. ಇಂಟರ್ ಮೀಡಿಯೇಟ್ ಅನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಮುಗಿಸಿದ ನಂತರ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿ ಬಿಎ ಪದವಿಯನ್ನು ಪಡೆದಿದ್ದರು.
ಮಹಾತ್ಮ ಗಾಂಧೀಜಿ ಅವರ ಮಾಡು ಇಲ್ಲವೆ ಮಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಮೈಸೂರಿನ ಎಚ್.ಸಿ.ದಾಸಪ್ಪ ಮತ್ತು ಯಶೋಧರಾ ದಾಸಪ್ಪ ಅವರೊಡನೆ ಜೈಲು ವಾಸವನ್ನು ಅನುಭವಿಸಿದರು.
ಎಚ್.ಎಂ.ಶಿವಣ್ಣ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿ ಹಲವು ಸಂಘ-ಸಂಸ್ಥೆಗಳು ಸಂತಾಪ ಸೂಚಿವೆ. ಮಹಾತ್ಮಾ ಗಾಂಧೀಜಿ ಅವರ ಕಟ್ಟಾ ಅನುಯಾಯಿಯಾಗಿದ್ದ ಶಿವಣ್ಣ ಅವರು ನನಗೆ ಹಲವು ದಶಕಗಳಿಂದ ಪರಿಚಿತರು. ಇಳಿವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಾಮಾಣಿಕ ಸೇವೆ ಮಾಡಿದ್ದನ್ನು ನಾನು ಹತ್ತಿರದಿಂದ ಬಲ್ಲೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.
ಆದಿಚುಂಚನಗಿರಿ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಶಿವಣ್ಣ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಅವರ ಅಗಲಿಕೆಯಿಂದ ಸಮಾಜವು ಹೋರಾಟಗಾರರೊಬ್ಬರನ್ನು ಕಳೆದುಕೊಂಡಿದೆ. ಶಿವಣ್ಣನವರು ಸಮುದಾಯಕ್ಕೆ ನೀಡಿದ ಸೇವೆ ಪರಿಗಣಿಸಿ ಚುಂಚಶ್ರೀ ಪ್ರಶಸ್ತಿ ನೀಡಲಾಗಿತ್ತು. ಅದರ ಬದುಕು ಇಂದಿನವರಿಗೆ ಮಾದರಿ ಎಂದು ಸ್ಮರಿಸಿದ್ದಾರೆ.
ಸಮಾಜಕ್ಕೆ ನಷ್ಟ: ಎಚ್.ಎಂ.ಶಿವಣ್ಣ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಕೆಡಿಪಿ ಸಭೆಯ ಕೊನೆಯಲ್ಲಿ ಸಂತಾಪ ಸೂಚಿಸಿದರು. ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದವರಲ್ಲಿ ಉಳಿದಿರುವವರೆ ಕೆಲವರು. ಸಮಾಜಕ್ಕೆ ಕೊಂಡಿಯಂತೆ ಇದ್ದವರು ಅವರ ನಿಧನ ಸಮಾಜಕ್ಕೆ ನಷ್ಟ ಉಂಟು ಮಾಡಿದೆ ಎಂದರು.
ಕಸಾಪ ಸಂತಾಪ: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ರಾಜ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಬಿ ಮದನಗೌಡ ಹಾಗೂ ರಾಜ್ಯ ಮಾರ್ಗದರ್ಶಿ ಸಮಿತಿ ಸದಸ್ಯರಾದ ಶಿವಮೂರ್ತಿ, ಮುಳ್ಕೆರೆ ಪ್ರಕಾಶ್, ಹೆತ್ತೂರು ನಾಗರಾಜ್, ಗೌರವ ಕಾರ್ಯದರ್ಶಿಗಳಾದ ಬಿ.ಆರ್ ಬೊಮ್ಮೇಗೌಡ, ಜಾವಗಲ್‌ಪ್ರಸನ್ನ ಕುಮಾರ್ ಸೇರಿದಂತೆ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.