

ಬೆಂಗಳೂರು
ಶಾಲಾ ಶಿಕ್ಷಣ ಇಲಾಖೆ, ಬೆಂ.ನಗರ ಜಿಲ್ಲಾ ಪಂಚಾಯಿತಿ ಮತ್ತು ಸಂಕಲ್ಪ್ ಲರ್ನಿಂಗ್ ಸಂಸ್ಥೆ ಸಹಯೋಗದಲ್ಲಿ 9ನೇ ತರಗತಿ ಉತ್ತೀರ್ಣರಾಗಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ತರಗತಿಗಳಿಗೆ ಪೂರ್ವಸಿದ್ಧತಾ ತರಗತಿಗಳನ್ನು ನಡೆಸುತ್ತಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ಉಚಿತವಾಗಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ತರಗತಿಗಳು ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ಯೂಟ್ಯೂಬ್ ಲೈವ್ ತರಗತಿಗಳು http://www.YouYube.com@SankalpLearningSolutions ಮೂಲಕ ಪ್ರಸಾರವಾಗಲಿವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ತರಗತಿಗಳು ನಡೆಯಲಿವೆ.
ಈಗಾಗಲೇ ತರಗತಿಗಳು ಆರಂಭವಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ನಡೆಯಲಿವೆ. ಬೆಂಗಳೂರು ಉತ್ತರ ಜಿಲ್ಲೆಯ 59 ಸರ್ಕಾರಿ ಪ್ರೌಢಶಾಲೆಯ 5,839 ವಿದ್ಯಾರ್ಥಿಗಳು ಹಾಗೂ 124 ಅನುದಾನಿತ ಪ್ರೌಢಶಾಲೆಗಳ 6,706 ವಿದ್ಯಾರ್ಥಿಗಳು ಸೇರಿ ಒಟ್ಟು 12,545 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.
ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಲು ಮತ್ತು ತರಗತಿಗಳಿಗೆ ಹಾಜರಾಗುತ್ತಿರುವ ಬಗ್ಗೆ ಬಿಇಒ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಕ್ರಮ ವಹಿಸುವಂತೆ ಬೆಂ. ಉತ್ತರ ಜಿಲ್ಲೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.