ಕಾಡಾನೆ ಉಪಟಳಕ್ಕೆ ಮುಕ್ತಿ ಸನ್ನಿಹಿತ

Wild elephant Midnight Round at Villages near forest
Published on

ತಕ್ಷಣ ಕಾರ್ಯಾಚರಣೆಗಿಳಿಯುವ ಕಾರ್ಯಪಡೆ

40ಕ್ಕೂ ಹೆಚ್ಚಿದ್ದ ಗಜಪಡೆ ಸಂಖ್ಯೆ 8ಕ್ಕೆ ಇಳಿಕೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ರೈತರು ಹಾಗೂ ಅರಣ್ಯ ಇಲಾಖೆಗೆ ಹಲವು ವರ್ಷಗಳಿಂದ ತಲೆನೋವಾಗಿರುವ ಕಾಡಾನೆಗಳ ಸಮಸ್ಯೆಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆಯೇ? ಸದ್ಯ ಇಂತಹದೊದು ಆಶಾಭಾವ ಮೂಡಿದ್ದು, ಅರಣ್ಯ ಇಲಾಖೆಯ ಶ್ರಮ ಹಾಗೂ ಆನೆ ಕಾರ್ಯಪಡೆ (ಟಾಸ್‌‌ಕೆೆರ್ಸ್) ರಚನೆಯಾದ ನಂತರ ನಡೆದಿರುವ ಪೂರಕ ಬೆಳವಣಿಗೆಗಳು ಈ ಆಶಾಭಾವನೆಗೆ ಕಾರಣವಾಗಿವೆ.

ಹೌದು, ಚನ್ನಪಟ್ಟಣ ತಾಲೂಕು ಸೇರಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳ ದೊಡ್ಡ ಸಮಸ್ಯೆಯಾಗಿದೆ. ತಾಲೂಕಿನಲ್ಲಂತೂ 2010ರಿಂದ ಇದುವರೆಗೂ ಈ ಸಮಸ್ಯೆ ದೊಡ್ಡಮಟ್ಟದಲ್ಲಿ ಬೇರೂರಿದೆ.  ಕಾಡಂಚಿನ ಗ್ರಾಮಗಳು, ತಾಲೂಕಿನ ಕೆಲಭಾಗದ ರೈತರು ಕಾಡಾನೆಗಳ ಉಪಟಳದಿಂದ ಹೈರಾಣಾಗಿದ್ದಾರೆ. ಬೆಳೆಗಳು ಗಜರಾಯನ ಪಾಲಾಗಿ ಕೋಟ್ಯಂತರ ರೂ.ನಷ್ಟವೂ ಆಗಿದೆ. ಇದರೊಂದಿಗೆ, ಪ್ರಾಣಹಾನಿಯೂ ಆಗಿದೆ. ಹಿಂಡು ಹಿಂಡಾಗಿ ನಾಡಿನತ್ತ ಲಗ್ಗೆ ಇಡುವ ಗಜಪಡೆ ಕಂಡು ಜನತೆ ಬೆಚ್ಚಿ ಬಿದ್ದಿದ್ದಾರೆ.

ತಾಲೂಕು ಮೊದಲು!

ರಾಜ್ಯದಲ್ಲೇ ಅತಿಹೆಚ್ಚು ಆನೆ ಉಪಟಳವಿರುವ ಜಿಲ್ಲೆಗಳ ಪಟ್ಟಿಯಲ್ಲಿ ರಾಮನಗರ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ಮಟ್ಟಿಗೆ ಚನ್ನಪಟ್ಟಣ ತಾಲೂಕು ಆನೆ ಬಾಧಿತ ತಾಲೂಕುಗಳಲ್ಲಿ ಮೊದಲನೆಯದಾಗಿದೆ. ತಾಲೂಕಿನ ವಿರುಪಾಕ್ಷಿಪುರ ಹೋಬಳಿಯಂತೂ ಆನೆ ದಾಳಿ ಸಮಸ್ಯೆಯಿಂದ ನಲುಗಿದೆ. 2022-23ನೇ ಸಾಲಿನಲ್ಲಿ ಆನೆ ದಾಳಿಯಿಂದಾದ ನಷ್ಟಕ್ಕೆ ತಾಲೂಕಿಗೆ 1.75 ಕೋಟಿ ರೂ. ಬೆಳೆ ಪರಿಹಾರ ಘೋಷಣೆಯಾಗಿದ್ದು, ಇದು ಆನೆ ದಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ. ಕೇವಲ ಕಾಡಂಚಿನಲ್ಲಿ ಮಾತ್ರವಲ್ಲದೆ, ನಗರದ ಸನಿಹಕ್ಕೂ ಲಗ್ಗೆ ಇಟ್ಟಿರುವ ಸಾಕಷ್ಟು ನಿದರ್ಶನಗಳಿವೆ.

ಇಳಿಮುಖಗೊಂಡ ಪುಂಡಾನೆಗಳು?

ಚನ್ನಪಟ್ಟಣ ಅರಣ್ಯ ವಲಯ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ 40ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದವು. ಕಾವೇರಿ ವನ್ಯಜೀವಿ ಧಾಮದಿಂದ ಬಂದು ತಾಲೂಕು ವ್ಯಾಪ್ತಿಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ನೆಲೆಸಿದ್ದವು. ನೀರಿನ ಲಭ್ಯತೆ, ಉತ್ತಮ ಮೇವು ಹಾಗೂ ವಾಸಕ್ಕೆ ಹೇಳಿ ಮಾಡಿಸಿದ ಅರಣ್ಯ ಹೆಚ್ಚಾಗಿರುವ ಕಾರಣ ಇಲ್ಲಿಯೇ ನೆಲೆಸಿದವು. ಇವುಗಳೆಲ್ಲವೂ ಗಂಡಾನೆಗಳು ಎಂಬುದು ಮತ್ತೊಂದು ವಿಶೇಷ.

ಈ ಕಾರಣದಿಂದಲೇ ಸಾಕಷ್ಟು ಉಪಟಳ ನೀಡುತ್ತಿದ್ದವು ಎನ್ನಲಾಗಿದೆ. ಸದ್ಯ ಈ ಪುಂಡಾನೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಕಾಡನಕುಪ್ಪೆ, ನರಿಕಲ್ಲುಗುಡ್ಡ ಸೇರಿ ಕೆಲಭಾಗದಲ್ಲಿ ಸದ್ಯ 8 ಆನೆಗಳು ಬೀಡುಬಿಟ್ಟಿದ್ದು, ಇವುಗಳನ್ನು ವನ್ಯಜೀವಿ ಧಾಮದತ್ತ ಓಡಿಸಿ, ಮತ್ತೆ ಆ ಕಡೆಯಿಂದ ವಾಪಸ್ ಬರದಂತೆ ತಡೆದರೆ ಆನೆ ಸಮಸ್ಯೆ ಶಾಶ್ವತವಾಗಿ ಮರೆಯಾಗಲಿದೆ ಎನ್ನಲಾಗಿದೆ.

ಸಿಬ್ಬಂದಿ ಕೊರತೆಗೆ ಸಿಕ್ತು ಟಾಸ್ಕ್ ಫೋರ್ಸ್ ಬಲ!


ಚನ್ನಪಟ್ಟಣ ತಾಲೂಕು ವಲಯದಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಕೇವಲ ಆರು ಮಂದಿ ಗಾರ್ಡ್‌ಗಳಿದ್ದಾರೆ. ಆದರೆ, ನಿರಂತರವಾಗಿರುವ ಕಾಡಾನೆಗಳ ಸಮಸ್ಯೆಗೆ ಸಿಬ್ಬಂದಿ ಬಲ ಸಾಕಾಗುವುದಿಲ್ಲ. ಆದರೆ, ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾರ್ಯಪಡೆ ಆನೆ ಹಾವಳಿ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎನ್ನಲಾಗಿದೆ. ಪ್ರತ್ಯಕ್ಷವಾದ ತಕ್ಷಣವೇ ಅವುಗಳನ್ನು ಹಿಮ್ಮೆಟ್ಟಿಸಲು ಕಾರ್ಯಪಡೆ ಸಾಥ್ ನೀಡುತ್ತಿರುವುದು ಅನುಕೂಲವಾಗಿದೆ.

ತಾಲೂಕು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಆನೆಗಳ ಉಪಟಳಕ್ಕೆ ನಿಯಂತ್ರಣ ಹಾಕಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಶ್ರಮಪಡುತ್ತಿದ್ದು, ಕಾಡಾನೆಗಳ ಸಂಖ್ಯೆ ಇಳಿಮುಖವಾಗಿದೆ. ಇಲಾಖೆಗೆ ಕಾರ್ಯಪಡೆ ಬಲ ಸಿಕ್ಕಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಸಾತನೂರಿಗೆ ಏಕೆ ಎಂಬುದೇ ಪ್ರಶ್ನೆ?

ಆನೆಗಳ ಉಪಟಳ ಮೀತಿ ಮೀರಿದ ಹಿನ್ನೆಲೆಯಲ್ಲಿ ಕಳೆದ ಜು.1ರಿಂದ ಜಿಲ್ಲೆಯಲ್ಲಿ ವಿಶೇಷ ಆನೆ ಕಾರ್ಯಪಡೆ ಆರಂಭಿಸಲಾಯಿತು. ಕಾರ್ಯಪಡೆ ಆರಂಭಗೊಂಡಿರುವುದು ಒಳ್ಳೆಯ ಬೆಳವಣಿಗೆಯಾದರೂ, ಇದರ ಕೇಂದ್ರಸ್ಥಾನ ಸಾತನೂರು ಆಗಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ. ಆನೆಗಳನ್ನು ಓಡಿಸಲು ಕಾರ್ಯಪಡೆ ರಚಿಸಲಾಗಿದೆ.

ಓರ್ವ ಆರ್‌ಎ್ಒ, ಮೂವರು ಎಆರ್‌ಎಫ್‌ಒ, 20ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕಂಟ್ರೋಲ್ ರೂಂ ಎಲ್ಲವನ್ನೂ ಈ ಕಾರ್ಯಪಡೆ ಹೊಂದಿದೆ. ರಾಮನಗರ ವಿಭಾಗದಲ್ಲಿ ಚನ್ನಪಟ್ಟಣ ಅತಿಹೆಚ್ಚು ಆನೆ ಬಾಧಿತ ವಲಯವಾಗಿದ್ದು, ಕಾರ್ಯಪಡೆಗೆ ತಾಲೂಕನ್ನು ಕೇಂದ್ರಸ್ಥಾನ ಮಾಡಬೇಕಿತ್ತು. ಆದರೆ, ಕೇಂದ್ರ ಸಾತನೂರು ಆಗಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net