ಬಿಎಂಟಿಸಿ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ

BMTC
Published on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಜಯನಗರದ 5ನೇ ಬ್ಲಾಕ್​ನಲ್ಲಿರುವ ವಾಯು ಚೆಸ್ಟ್​ ಆ್ಯಂಡ್​ ಸ್ಲೀಪ್​ ಸೆಂಟರ್​ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ಪ್ರಾರಂಭಗೊಂಡಿದೆ. ಶಿಬಿರವು ಪ್ರತಿ ಶನಿವಾರ ಮತ್ತು ಭಾನುವಾರ ನಡೆಯುತ್ತಿದ್ದು, ದಿನಕ್ಕೆ 50 ಸಿಬ್ಬಂದಿ ತಪಾಸಣೆಗೊಳಪಡಲಿದ್ದಾರೆ.

ನಗರದ ವಾಹನದಟ್ಟಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಶ್ವಾಸಕೋಶ ಸಂಬಂಧಿತ ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್​ ಮತ್ತು ಸುಧಾರಿತ ಪರೀೆಗಳನ್ನು ಮಾಡಬೇಕೆಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಸಂಸ್ಥೆಯ ಎಲ್ಲ ಸಿಬ್ಬಂದಿ ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್​.ರಾಮಚಂದ್ರನ್​ ಸೂಚಿಸಿದ್ದಾರೆ.

ಈಗಾಗಲೇ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ 40 ವರ್ಷ ಮೇಲ್ಪಟ್ಟ ಸುಮಾರು 11,200 ಸಿಬ್ಬಂದಿಗೆ ಹೃದಯ ಸಂಬಂಧಿತ ತಪಾಸಣೆಯನ್ನು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದಲ್ಲಿ ವಾಯು ಚೆಸ್ಟ್​ ಆ್ಯಂಡ್​ ಸ್ಲೀಪ್​ ಸೆಂಟರ್​ ಸ್ಥಾಪಕ ಡಾ. ಎಂ.ರವೀಂದ್ರ ಮೆಹ್ತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net