ವ್ಯಾಪಾರಿಗಳನ್ನು ಕಂಗೆಡಿಸಿದ ಬಿಟ್ಟಿ ಭರಾಟೆ

Rmgm-Ph-001-Bannikuppe -Jedi Mannu Ganesha-Story-Photo-29-8-2024 (1)
Published on

*ರಾಜಕೀಯ ನಾಯಕರಿಂದ ಉಚಿತ ಗಣೇಶ ಮೂರ್ತಿ ವಿತರಣೆ

*300ಕ್ಕೂ ಹೆಚ್ಚು ಬುಕ್ಕಿಂಗ್​ ಕ್ಯಾನ್ಸಲ್​

* ಸಂಕಷ್ಟದಲ್ಲಿ ವರ್ತಕರು

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ ತಾಲೂಕಿನಲ್ಲಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿರುವ ಹಿನ್ನೆಲೆಯಲ್ಲಿ ಮೂರ್ತಿಗಳ ವ್ಯಾಪಾರವನ್ನೇ ನೆಚ್ಚಿ ಲಾಂತರ ರೂ. ಬಂಡವಾಳ ಹೂಡಿರುವ ವರ್ತಕರು ಕಂಗಾಲಾಗಿದ್ದಾರೆ. ಹೌದು.., ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಯುವಸಮುದಾಯದ ಮನಸ್ಸು ಗೆಲ್ಲುವ ಉದ್ದೇಶದಿಂದ ತಾಲೂಕಿನ ರಾಜಕೀಯ ನಾಯಕರು ನಾ ಮುಂದು, ತಾ ಮುಂದು ಎಂದು ಗಣೇಶನ ಮೂರ್ತಿಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಇದರ ಎಫೆಕ್ಟ್​ ಮೂರ್ತಿ ಮಾರಾಟಗಾರರಿಗೆ ದೊಡ್ಡದಾಗಿ ತಟ್ಟಿದೆ. ಲಾಭವಿರಲಿ, ಕನಿಷ್ಠ ಹಾಕಿರುವ ಬಂಡವಾಳದ ಗತಿಯೇನಪ್ಪ ಗಣಪ... ಎಂದು ಕಣ್ಣುಬಾಯಿ ಬಿಡುವಂತಾಗಿದೆ.

ಸಾವಿರಾರು ಮೂರ್ತಿ ವಿತರಣೆ!

ಈ ಬಾರಿ ಗಣೇಶೋತ್ಸವಕ್ಕೆ ತಾಲೂಕಿನಾದ್ಯಂತ ಸಾವಿರಾರು ಮೂರ್ತಿಗಳನ್ನು ರಾಜಕೀಯ ನಾಯಕರು ಉಚಿತವಾಗಿ ವಿತರಿಸುತ್ತಿದ್ದಾರೆ. ಮಾಜಿ ಸಚಿವ, ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​, ತಾಲೂಕು ಜೆಡಿಎಸ್​ ಅಧ್ಯ ಎಚ್​.ಸಿ.ಜಯಮುತ್ತು, ಕಾಂಗ್ರೆಸ್​ ಮುಖಂಡ ಕೋಡಂಬಳ್ಳಿ ಶಿವಮಾದು ಈಗಾಗಲೇ ಮೂರ್ತಿಗಳ ವಿತರಣೆಗೆ ಸಜ್ಜಾಗಿದ್ದಾರೆ. ಮೂರ್ತಿಗಳನ್ನು ವಿತರಿಸಲು ನೋಂದಣಿಗೂ ಚಾಲನೆ ನೀಡಲಾಗಿದೆ. ಜಯಮುತ್ತು ಹಲವು ವರ್ಷಗಳಿಂದ ಗಣೇಶ ಮೂರ್ತಿ ವಿತರಿಸುತ್ತ ಬಂದಿದ್ದು, ಯೋಗೇಶ್ವರ್​ ಎರಡನೇ ಬಾರಿಗೆ ಮೂರ್ತಿ ವಿತರಣೆ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್​ ಮುಖಂಡ ಶಿವಮಾದು ಇದೇಮೊದಲ ಬಾರಿಗೆ ಕೋಡಂಬಳ್ಳಿ ವ್ಯಾಪ್ತಿಯಲ್ಲಿ ಗಣೇಶ ವಿತರಿಸಲು ಮುಂದಾಗಿದ್ದಾರೆ. ಉಪಚುನಾವಣೆ ಹೊಸ್ತಿಲಿನಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ಮೂರು ರಾಜಕೀಯ ಪಗಳು ಮೂರ್ತಿ ವಿತರಣೆಗೆ ಮುಂದಾಗಿರುವುದು ವಿಶೇಷ. ಒಂದೆಡೆ, ರಾಜಕೀಯ ನಾಯಕರು ಗಣೇಶಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಪ್ರತಿಷ್ಠಾಪಿಸುವರ ಸಂಭ್ರಮಕ್ಕೆ ಕಾರಣವಾಗಿದ್ದರೆ ಮತ್ತೊಂದೆಡೆ, ಮೂರ್ತಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ವರ್ತಕರ ಸಂಭ್ರಮ ಕಸಿದಿದೆ.

ಭಾರಿ ಹೊಡೆತ!

ತಾಲೂಕಿನಲ್ಲಿ ಸಾವಿರಾರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಗಣೇಶಮೂರ್ತಿ ಮಾರಾಟಗಾರರಿಗೆ ಭಾರಿ ಹೊಡೆತ ನೀಡಿದೆ. ಹಲವು ವರ್ತಕರು ಹಬ್ಬವನ್ನು ನೆಚ್ಚಿಕೊಂಡು ಮೂರ್ತಿಗಳ ಮೇಲೆ ಲಾಂತರ ರೂ. ಬಂಡವಾಳ ಹೂಡಿದ್ದಾರೆ. ತಮಿಳುನಾಡು, ಬೆಂಗಳೂರು, ತಿರುಪತಿ, ಚಿಕ್ಕ ತಿರುಪತಿ, ಹೊಸಕೋಟೆ ಸೇರಿ ಹಲವೆಡೆಯಿಂದ ತರಹೇವಾರಿ ಗಣೇಶ ಮೂರ್ತಿಗಳನ್ನು ತರಿಸಿದ್ದಾರೆ. ನೂರು ರೂ.ಗಳಿಂದ ಹಿಡಿದು ಲ ರೂ.ವರೆಗೂ ಮೂರ್ತಿಗಳನ್ನು ತಂದು ಗೋದಾಮುಗಳಲ್ಲಿ ಇರಿಸಿದ್ದಾರೆ. ಆದರೆ, ಈ ಮೂರ್ತಿಗಳನ್ನು ಕೊಳ್ಳುವವರು ಇಲ್ಲದೆ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ ಹಲವು ಮಂದಿ ಮೂರ್ತಿ ಮಾರಾಟಗಾರರಿದ್ದು, ಒರ್ವ ಮಾರಾಟಗಾರ ಕನಿಷ್ಠ 5 ರಿಂದ ಹಿಡಿದು 50 ಲ ರೂ. ವರೆಗೆ ಬಂಡವಾಳ ಹೂಡಿದ್ದಾನೆ. ಸಾಲಸೋಲ ಮಾಡಿ ಬಂಡವಾಳ ಹೂಡಿರುವ ಮಾರಾಟಗಾರರಿಗೆ ಉಚಿತ ಮೂರ್ತಿ ವಿತರಣೆ ಮಾಸ್ಟರ್​ ಸ್ಟ್ರೊಕ್​ ನೀಡಿದೆ.

ಇಷ್ಟು ಪ್ರಮಾಣದಲ್ಲಿ ಉಚಿತವಾಗಿ ಮೂರ್ತಿಗಳನ್ನು ವಿತರಿಸುತ್ತಾರೆ ಎಂಬುದು ಮೊದಲೇ ಗೊತ್ತಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದೆವು. ಆದರೆ, ಈಗಾಗಲೇ ಮೂರ್ತಿಗಳನ್ನು ತಂದು ಗೋದಾಮಿನಲ್ಲಿ ಇರಿಸಿದ್ದೇವೆ. ಗಣೇಶ ಮೂರ್ತಿ ವ್ಯಾಪಾರವಿರಲಿ, ಅವುಗಳನ್ನು ನೋಡಲೂ ಯುವಕರು ಬರುತ್ತಿಲ್ಲ ಎಂದು ಮೂರ್ತಿ ಮಾರಾಟಗಾರರೊಬ್ಬರು ಅಳಲು ತೋಡಿಕೊಂಡರು.

ಮುಂಗಡ ಕಾಯ್ದಿರಿಸಿದ್ದವು ರದ್ದು

ಈ ವರ್ಷವೂ ಹಲವು ಮಂದಿಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪಿಸಲು ತಾಲೂಕಿನ ಮಾರಾಟಗಾರರ ಬಳಿ ಮೂರ್ತಿಗಳನ್ನು ಬುಕ್ಕಿಂಗ್​ ಮಾಡಿದ್ದರು. 100 ರಿಂದ ಹಿಡಿದು 1000 ರೂ.ವರೆಗೆ ಮುಂಗಡ ನೀಡಿದ್ದರು. ಆದರೆ, ಉಚಿತ ಮೂರ್ತಿ ವಿತರಣೆಯಲ್ಲೂ ತರಹೇವಾರಿ ಮೂರ್ತಿಗಳು ಇರುವ ಹಿನ್ನೆಲೆಯಲ್ಲಿ ಹಣಕೊಟ್ಟು ಯಾಕೆ ಖರೀದಿಸಬೇಕು ಎಂಬ ನಿಟ್ಟಿನಲ್ಲಿ ಬುಕ್ಕಿಂಗ್​ ರದ್ದುಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ 300ಕ್ಕೂ ಹೆಚ್ಚು ಮೂರ್ತಿಗಳ ಬುಕ್ಕಿಂಗ್​ ಕ್ಯಾನ್ಸಲ್​ ಆಗಿದೆ.

ವ್ಯಾಪಾರವನ್ನೇ ನೆಚ್ಚಿಕೊಂಡು ಲಾಂತರ ರೂ. ಬಂಡವಾಳ ಹೂಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲುಭಾಗ ವ್ಯಾಪಾರವಾಗುವುದು ಕಷ್ಟ. ಈಗಾಗಲೇ ನಾವು ಮೂರ್ತಿಗಳಿಗೆ ಪೂರ್ತಿ ಹಣ ಪಾವತಿಸಿ ತಂದಿದ್ದೇವೆ. ಅಂಗಡಿ ಬಾಡಿಗೆ, ಗೋದಾಮಿನ ಬಾಡಿಗೆ ಸ್ವಂತ ಹಣದಲ್ಲಿ ಭರಿಸಬೇಕಿದೆ. ಇಷ್ಟು ಪ್ರಮಾಣದಲ್ಲಿ ಉಚಿತವಾಗಿ ವಿತರಿಸುತ್ತಾರೆ ಎಂದಿದ್ದರೆ ಬಂಡವಾಳವನ್ನೇ ಹಾಕುತ್ತಿರಲಿಲ್ಲ. ಗೋದಾಮಿನಲ್ಲಿ ಮುಂದಿನ ವರ್ಷದವರೆಗೂ ಮೂರ್ತಿಗಳನ್ನು ಇಟ್ಟು ಬಾಡಿಗೆ ಕಟ್ಟುವುದು ಕಷ್ಟ.> ವರದಬಾಬು, ಗಣೇಶ ಮೂರ್ತಿ ಮಾರಾಟಗಾರ ಚನ್ನಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net