

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆ ಕೊಳ್ಳೇಗಾಲ, ರೋಟರಿ ಮಿಡ್-ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಶಿಬಿರ ಉದ್ದೇಶಿಸಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ಜನರ ಅನುಕೂಲಕ್ಕೆ ಸಂಸ್ಥೆ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದೀಗ 36ನೇ ತಿಂಗಳ ಶಿಬಿರ ಯೋಜಿಸುತ್ತಿದ್ದು, ಗ್ರಾಮೀಣ ಭಾಗದ ಬಡ-ಕೂಲಿ ಕಾರ್ಮಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಶಿಬಿರದಲ್ಲಿ 106 ಜನರು ತಪಾಸಣೆಗೆ ಒಳಪಟ್ಟಿದ್ದು, 58 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತ್ತೂರಿಗೆ ಕಳುಹಿಸಿಕೊಡಲಾಯಿತು ಎಂದರು.
ಅರವಿಂದ ಕಣ್ಣಿನ ಆಸ್ಪತ್ರೆಯ ವ್ಯೆದ್ಯರಾದ ಡಾ.ನಿಲ್ಲಂಕ್ ಮೆಹ್ತಾ , ಜಯ್ ಆಸ್ವಾಲ್, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್, ಆಸ್ಪತ್ರೆಯ ಸಿಬ್ಬಂದಿ, ವಿಶ್ವ ಚೇತನ ಸಮೂಹ ಸಂಸ್ಥೆಯ ಸಂಯೋಜಕ ರಾಜೇಶ್ ಇತರರು ಇದ್ದರು.