

ರಾಣೆಬೆನ್ನೂರ: ಅನಾರೋಗ್ಯಕ್ಕೀಡಾದವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ತಾತ್ಕಾಲಿಕವಾಗಿ ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಅವರು ಶಾಸಕ ಅರುಣಕುಮಾರ ಪೂಜಾರ ಅವರಿಗೆ ಸೋಮವಾರ ರಾತ್ರಿ ಆಂಬುಲೆನ್ಸ್ ಹಸ್ತಾಂತರಿಸಿದರು.
ಅರ್ಚಕ ಸಂತೋಷ ಭಟ್, ಕರೊನಾ 2ನೇ ಅಲೆಯಿಂದ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಎಲ್ಲ ಜನರಿಗೆ ಆಂಬುಲೆನ್ಸ್ ಸೇವೆ ತಲುಪಲಿ ಹಾಗೂ ಕಷ್ಟದಲ್ಲಿರುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ‘ನಮ್ಮ ಗ್ರಾಮ ನಮ್ಮ ಗುರಿ’ ತಂಡದಿಂದ ಶಾಸಕ ಅರುಣಕುಮಾರ ಪೂಜಾರ ಅವರಿಗೆ ನೀಡಿದ್ದೇವೆ. ಅವರು ಇದರ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸಲಿದ್ದಾರೆ ಎಂದರು.
ಅರುಣಕುಮಾರ ಪೂಜಾರ ಮಾತನಾಡಿ, ಕ್ಷೇತ್ರದ ಜನರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆ ಕಲ್ಪಿಸಬೇಕು ಎಂಬ ಹಿತದೃಷ್ಟಿಯಿಂದ ಆಂಬುಲೆನ್ಸ್ ನೀಡಿದ್ದಾರೆ. ಶೀಘ್ರವೇ ಜನರಿಗೆ ಸಹಾಯವಾಣಿ ನಂಬರ್ ನೀಡುತ್ತೇವೆ. ಕರೆ ಮಾಡಿದರೆ ಕೂಡಲೆ ರೋಗಿ ಇರುವಲ್ಲಿ ತೆರಳಿ ಅವಶ್ಯವಿರುವ ಆಸ್ಪತ್ರೆಗೆ ದಾಖಲಿಸಲಾಗುವುದು. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಪ್ರಮುಖರಾದ ಫಕೀರಪ್ಪ ಐಗಳ, ಹನುಮಂತಪ್ಪ ನಾಯರ, ದೇವಪ್ಪ ವಾಸರದ, ನಾಗರಾಜ ಸಂಶಿ, ಹೊನ್ನಪ್ಪ ಸತಗಿ ಮತ್ತಿತರರು ಉಪಸ್ಥಿತರಿದ್ದರು.