ಭೂ ಪರಿಹಾರ ನೆಪದಲ್ಲಿ ಮಾಜಿ ಎಂಎಲ್ಸಿಗೆ ವಂಚನೆ

lingappa
Published on

* ಸಿ.ಎಂ.ಲಿಂಗಪ್ಪ ಹಣ ಕಳೆದುಕೊಂಡವರು

* ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಸರ್ಕಾರಿ ಉದ್ಯೋಗಿ ಹೆಸರಿನಲ್ಲಿ ಮೋಸ

ರಾಮನಗರ

ಭೂ ಪರಿಹಾರ ಕೊಡಿಸುವ ವಿಚಾರದಲ್ಲಿ ಸರ್ಕಾರಿ ಉದ್ಯೋಗಿ ಎಂದು ಹೇಳಿಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಅವರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲೇ ಸಿ.ಎಂ.ಲಿಂಗಪ್ಪ ಅವರ ಆಪ್ತ ಗಂಗಾಧರಯ್ಯ ಎಂಬುವರಿಂದ 1.37 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಈ ಸಂಬಂಧ ರಾಮನಗರ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ:

ಜು.26 ರಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ವ್ಯಕ್ತಿಯೊಬ್ಬ ಕರೆಮಾಡಿ ಬಿಡದಿ ಪುರಸಭೆ ಅಧಿಕಾರಿ ನಟರಾಜ್ ಎಂದು ಪರಿಚಯಮಾಡಿಕೊಂಡಿದ್ದಾನೆ. ಸ್ವಾಧೀನವಾಗಿರುವ ನಿಮ್ಮ ಜಮೀನಿಗೆ ಸಂಬಂಧಿಸಿದಂತೆ 3 ತಿಂಗಳ ಹಿಂದೆಯೇ 23.35 ಲಕ್ಷ ರೂ. ಜಿಲ್ಲಾ ಖಾಜಾನೆಯಲ್ಲಿ ಜಮೆಯಾಗಿದೆ. ನಾನು ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಾಯುತ್ತಿದ್ದು, ತಕ್ಷಣ 1.37 ಲಕ್ಷ ರೂ. ಬಾಂಡ್ ತೆಗೆದುಕೊಂಡು ಬಂದರೆ ನಿಮಗೆ ಪರಿಹಾರದ ಹಣ ಕೊಡಿಸುವುದಾಗಿ ಹೇಳಿದ್ದಾರೆ.

ತಕ್ಷಣ ಸಿ.ಎಂ.ಲಿಂಗಪ್ಪ, ಆಪ್ತ ಬಿ.ಎನ್. ಗಂಗಾಧರಯ್ಯ ಹಾಗೂ ಚಾಲಕ ಹನುಮಯ್ಯ ಅವರ ಜತೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಬರುತ್ತಿರುವಾಗಲೇ ಎರಡುಬಾರಿ ಕರೆಮಾಡಿ ಬರುತ್ತಿರುವುದನ್ನು ವಂಚಕ ಖಚಿತಪಡಿಸಿಕೊಂಡಿದ್ದಾನೆ.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಭೂಸ್ವಾಧೀನಾಧಿಕಾರಿ ಕಚೇರಿಗೆ ಹೋದಾಗ ವಂಚಕ, ನಾನು ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಸಭೆಯಲ್ಲಿದ್ದೇನೆ. ಕೊಠಡಿ ಸಂಖ್ಯೆ 10 ಬಳಿ ಜಗದೀಶ್ ಎಂಬುವವರು ಇರುತ್ತಾರೆ. ಅವರು ನಿಮಗೆ ಖಜಾನೆಯಲ್ಲಿ ಕೆಲಸ ಮಾಡಿಕೊಡುತ್ತಾರೆ. ಬಾಂಡ್ ತಂದಿದ್ದೀರಾ ಎಂದು ಕೇಳಿದ್ದಾನೆ.

ಈ ವೇಳೆ ಯಾರ ಹೆಸರಿಗೆ ಬಾಂಡ್ ತರಬೇಕು ಎಂದಾಗ, ನಿಮ್ಮ ಗುರುತಿನ ಚೀಟಿಗೆ ಸಹಿಹಾಕಿ ನಿಮ್ಮ ಸಹಾಯಕರ ಕೈಯಲ್ಲಿ ಹಣ ಕಳುಹಿಸಿ, ಜಗದೀಶ್ ಅವರೇ ಬಾಂಡ್ ಖರೀದಿಮಾಡುತ್ತಾರೆ ಎಂದು ವಂಚಕ ನಂಬಿಸಿದ್ದಾನೆ. ಅದನ್ನು ನಂಬಿದ ಸಿ.ಎಂ.ಲಿಂಗಪ್ಪ, ಗಂಗಾಧರ್ ಕೈಯಲ್ಲಿ 1 ಲಕ್ಷ ರೂ. ಕಳುಹಿಸಿದ್ದಾರೆ. ಆಗ ಜಗದೀಶ್, ನಟರಾಜು 1.37 ಲಕ್ಷ ರೂ. ಕೊಡುವಂತೆ ಹೇಳಿದ್ದಾರೆ ಎಂದು ಪೂರ್ತಿಹಣ ಪಡೆದುಕೊಂಡಿದ್ದಾನೆ.

ಇದಾದ ಬಳಿಕ ಬ್ಯಾಂಕ್‌ಖಾತೆಗೆ ಹಣ ಜಿಲ್ಲಾ ಖಜಾನೆಯಿಂದ ನೇರವಾಗಿ ಜಮೆಯಾಗುತ್ತದೆ ಎಂದು ಹೇಳಿ ನೀವು ಮನೆಗೆ ಹೋಗಿ ಎಂದು ಕಳುಹಿಸಿದ್ದಾನೆ. ಇದಾದ ಬಳಿಕ ನಟರಾಜ್ ಎಂಬುವರ ದೂರವಾಣಿ ಸಂಖ್ಯೆಗೆ ಸಂಜೆ ಸಿ.ಎಂ.ಲಿಂಗಪ್ಪ ಕರೆಮಾಡಿದಾಗ ನಾಟ್‌ರೀಚಬಲ್ ಬಂದಿದೆ. ಬಳಿಕ ವಂಚನೆ ನಡೆದಿರುವುದು ತಿಳಿದು ದೂರು ದಾಖಲಿಸಿದ್ದಾರೆ.

ನಕಲಿ ನಟರಾಜ

ವಂಚನೆ ಬಳಿಕ, ಬಿಡದಿ ಪುರಸಭೆ ಅಧಿಕಾರಿ ಎಂದು ಹೇಳಿಕೊಂಡು ಕರೆಮಾಡಿದ್ದ ನಟರಾಜ್ ಬಗ್ಗೆ ತಿಳಿಯಲು ಸಿ.ಎಂ. ಲಿಂಗಪ್ಪ ಅವರ ಆಪ್ತರು ಬಿಡದಿ ಪುರಸಭೆಗೆ ಹೋಗಿ ವಿಚಾರಿಸಿದ್ದಾರೆ. ಆದರೆ, ಅಲ್ಲಿ ನಟರಾಜ್ ಎಂಬ ನೌಕರ ಇರುವುದು ತಿಳಿದು ಬಂದಿದೆ. ಆದರೆ, ಅವರನ್ನು ವಿಚಾರಿಸಿದಾಗ ನಾನು ಅವರಿಗೆ ಕರೆಯನ್ನೇ ಮಾಡಿಲ್ಲ ಎಂದು ನೌಕರ ಹೇಳಿದ್ದಾನೆ. ಅಲ್ಲದೆ, ಅವರ ದೂರವಾಣಿ ಸಂಖ್ಯೆ ಬೇರೆ ಎಂಬುದು ತಿಳಿದು ಬಂದಿದೆ. ಈಗ ಮಾಜಿ ಶಾಸಕರಿಗೆ ಕರೆಮಾಡಿ ವಂಚಿಸಿರುವ ನಕಲಿ ನಟರಾಜನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚೆನ್ನಾಗಿ ತಿಳಿದೆ ವಂಚನೆ

ಸಿ.ಎಂ.ಲಿಂಗಪ್ಪ ಅವರ ಆಸ್ತಿ ಭೂಸ್ವಾಧೀನಗೊಂಡಿದ್ದು, ಅವರಿಗೆ ಪರಿಹಾರ ಬರಬೇಕಿತ್ತು. ಪರಿಹಾರದ ಹಣವನ್ನು ಪಡೆಯಲು ಇಂತಿಷ್ಟು ಮೊತ್ತವನ್ನು ಸರ್ಕಾರಕ್ಕೆ ಬಾಂಡ್ ಮೂಲಕ ಪಾವತಿ ಮಾಡಬೇಕಿತ್ತು. ಈ ಎಲ್ಲ ವಿಚಾರವನ್ನು ತಿಳಿದಿದ್ದ ವ್ಯಕ್ತಿಯೇ ವಂಚನೆ ಮಾಡಿದ್ದಾನೆ. ಇನ್ನು ಜಿಲ್ಲಾಧಿಕಾರಿ ಕಚೇರಿಗೆ ಸಿ.ಎಂ. ಲಿಂಗಪ್ಪ ಅವರು ಹೋದಾಗ ಜಿಲ್ಲಾಧಿಕಾರಿ ಪ್ರಮುಖ ಸಭೆಯಲ್ಲಿದ್ದರು. ಈ ಕಾರಣದಿಂದಾಗಿ ಡಿಸಿ ಕಚೇರಿ ಸಿಬ್ಬಂದಿ ಸಿ.ಎಂ.ಲಿಂಗಪ್ಪ ಅವರನ್ನು ವೀಕ್ಷಕರ ಕೊಠಡಿಯಲ್ಲಿ ಕುಳ್ಳಿರಿಸಿದ್ದರು. ಇಡೀ ವಂಚನೆ ಪ್ರಕರಣ ಜಿಲ್ಲಾಧಿಕಾರಿ ಕಚೇರಿಯಲ್ಲೇ ನಡೆದಿರುವುದು ಗಮನಾರ್ಹ.

ತನಿಖೆ ಚುರುಕು:

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದು, ವಂಚಕರ ಸುಳಿವು ಪತ್ತೆಹಚ್ಚಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ. ಇನ್ನು ನಟರಾಜ್ ಎಂದು ಹೇಳಿಕೊಂಡು ಸಿ.ಎಂ.ಲಿಂಗಪ್ಪ ಅವರಿಗೆ ಕರೆಮಾಡಿದ್ದ ವ್ಯಕ್ತಿಯ ದೂರವಾಣಿ ಸಂಖ್ಯೆಗೆ ಜೂ.26ರ ಸಂಜೆ ಕರೆಮಾಡಿದಾಗ ಚಂದಾದರರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ತೆಲುಗಿನಲ್ಲಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net