

ಬೆಂಗಳೂರು: ತಾನು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಅಣ್ಣನ ಮಗಳು ಅಂತ ಹೇಳಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿರುವ ಪಲ್ಲವಿ ಎಂಬಾಕೆಯ ಮೋಡಸ್ ಆಪರಾಂಡಿ (ಕಾರ್ಯವಿಧಾನ) ಹೇಗಿತ್ತು ಎಂಬ ಕುರಿತು ಕುತೂಹಲಕರ ವಿಷಯಗಳು ಹೊರಬೀಳತೊಡಗಿವೆ.
ಆಕೆ ಮಾಟ ಮಂತ್ರ ತಂತ್ರ ಮಾಡುತ್ತಿದ್ದ ಗುರುಗಳೊಬ್ಬರ ಜತೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ. ಅದರಲ್ಲಿ ಆಕೆ ತಾನೇ ಕೌಟುಂಬಿಕ ಸಂಕಷ್ಟದಲ್ಲಿ ಇರುವುದಾಗಿ ಹೇಳಿಕೊಳ್ಳುತ್ತಾಳೆ. ತನ್ನ ಗಂಡನ ಜತೆಗಿನ ವೈಮನಸ್ಯದ ಬಗ್ಗೆ ಪ್ರಸ್ತಾಪಿಸಿ, ಆತನನ್ನು ಹೇಗಾದರೂ ಮಾಡಿ ತನ್ನ ‘ಕೈವಶ’ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾಳೆ.
ಅದಕ್ಕೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ಆ ‘ಗುರೂಜಿ’ ಹೇಳಿದರೂ, ಅದಕ್ಕೆ ಹಣ ಹೊಂದಿಸಲು ಸಿದ್ಧವಿರುವುದಾಗಿ ತಿಳಿಸುತ್ತಾಳೆ. ಇದೇ ಸಂದರ್ಭದಲ್ಲಿ ತಾನು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಅಣ್ಣನ ಮಗಳಾಗಿದ್ದು, ವಿಧಾನಸೌಧದಲ್ಲಿ ತನ್ನ ಮಾತು ನಡೆಯುತ್ತದೆ ಎನ್ನುತ್ತಾಳೆ. ಏನೇ ಕೆಲಸವಿದ್ದರೂ ತಾನು ಮಾಡಿಸಿಕೊಡುವುದಾಗಿ ಎಗ್ಗುಸಿಗ್ಗಿಲ್ಲದೇ ಆಮಿಷ ಒಡ್ಡುತ್ತಾಳೆ. ಅದೇ ಆಡಿಯೋ ಇದೀಗ ವೈರಲ್ ಆಗಿದ್ದು, ಸಖತ್ ಕುತೂಹಲಕರವಾಗಿದೆ.
ಇದೀಗ ಹಲವರು ಈಕೆಯ ವಿರುದ್ಧ ವಂಚನೆಯ ದೂರು ಕೊಟ್ಟಿದ್ದು ಸೋಲದೇವನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವಂಚನೆಗೊಳಗಾದವರೇ ಈಕೆಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.