ಅಪರಿಚಿತರಿಬ್ಬರಿಂದ ತೋಪಿನಲ್ಲಿ ಗಂಟೆಗಟ್ಟಲೆ ನಿರಂತರ ಅತ್ಯಾಚಾರ; ದೂರು ದಾಖಲಾಗಿ 10 ದಿನವಾದ್ರೂ ಕ್ರಮಕೈಗೊಳ್ಳದ್ದಕ್ಕೆ ಸಂತ್ರಸ್ತೆಯ ಪಾಲಕರ ಬೇಸರ

pic rape
Published on

ಬೆಂಗಳೂರು: ಯುವತಿಯೊಬ್ಬಳನ್ನು ಡ್ರಾಪ್​ ಕೊಡುವುದಾಗಿ ನಂಬಿಸಿ ಬೈಕ್​ನಲ್ಲಿ ಕರೆದೊಯ್ದ ಅಪರಿಚಿತರು ಬಳಿಕ ಆಕೆಯನ್ನು ತೋಪೋಂದಕ್ಕೆ ಒಯ್ದು ಅತ್ಯಾಚಾರ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ನೀಲಗಿರಿ ತೋಪಿನಲ್ಲಿ ಈ ಅತ್ಯಾಚಾರ ನಡೆದಿತ್ತು.

38 ವರ್ಷದ ಅವಿವಾಹಿತೆ ಮೇಲೆ ನ. 14ರಂದು ಅಪರಿಚಿತರು ಅತ್ಯಾಚಾರ ಎಸಗಿದ್ದರು. ಅಂದು ವಾಕಿಂಗ್ ಮುಗಿಸಿ ಮರಳುತ್ತಿದ್ದ ಆಕೆಯನ್ನು ಮನೆ ಬಳಿ ಬಿಡುವುದಾಗಿ ಹೇಳಿ ಬೈಕ್​ನಲ್ಲಿ ಕೂರಿಸಿಕೊಂಡಿದ್ದ ಆರೋಪಿಗಳು ಈ ಕೃತ್ಯವೆಸಗಿದ್ದರು.

ಪ್ರತ್ಯೇಕ ಬೈಕ್​​ಗಳಲ್ಲಿ ಬಂದಿದ್ದ ಅಪರಿಚಿತರು ಆಕೆಯನ್ನು ತೋಪಿಗೆ ಕರೆದೊಯ್ದು ಮಧ್ಯರಾತ್ರಿ ವರೆಗೂ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಇತ್ತ ರಾತ್ರಿ ಹತ್ತು ಗಂಟೆಯಾದರೂ ಮಗಳು ಮನೆಗೆ ಬರದ್ದರಿಂದ ಪಾಲಕರು ಪೊಲೀಸ್​ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ನಂತರ ಸ್ಥಳೀಯರ ಸಹಾಯದಿಂದ ಸಂತ್ರಸ್ತೆ ತೋಪಿನಿಂದ ಮನೆಗೆ ಮರಳಿದ್ದರು. ಮುಂಜಾನೆ ಮೂರು ಗಂಟೆ ಸುಮಾರಿಗೆ ಮನೆಗೆ ಬಂದ ಮಗಳನ್ನು ವಿಚಾರಿಸಿದಾಗ ಅತ್ಯಾಚಾರ ಪ್ರಕರಣ ತಿಳಿದುಬಂದಿತ್ತು. ಈ ಸಂಬಂಧ ಸಂತ್ರಸ್ತೆಯ ತಂದೆ ಹೊಸಕೋಟೆ ಪೊಲೀಸರಿಗೆ ನ. 15ರಂದು ದೂರು ನೀಡಿದ್ದರು.

ನ. 16ರಂದು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣ ದಾಖಲಾಗಿ ಹತ್ತು ದಿನಗಳು ಕಳೆದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಸಂತ್ರಸ್ತೆಯ ಪಾಲಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net