ನೌಕರಿ ಕೊಡಿಸುವುದಾಗಿ ವಂಚನೆ-ಪ್ರಕರಣ ದಾಖಲು

Published on

ಕುಮಟಾ: ಸರ್ಕಾರಿ ನೌಕರಿ ಕೊಡಿಸುತ್ತೇನೆಂದು 3 ಲಕ್ಷರೂ ಪಡೆದು ನೌಕರಿ ಕೊಡಿಸದೇ ವಂಚಿಸಿದ ಬಗ್ಗೆ ಇಬ್ಬರ ಮೇಲೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಅಘನಾಶಿನಿಯ ಕೆಳಗಿನಕೇರಿಯ ನರ್ಸ ಕೆಲಸ ಮಾಡುವ ಶೋಭಾ ಪರಮೇಶ್ವರ ಗೌಡ(28) ಸರ್ಕಾರಿ ನೌಕರಿ ಆಸೆಗೆ ಹಣಕೊಟ್ಟು ಮೋಸಹೋದ ಮಹಿಳೆಯಾಗಿದ್ದು, ಅಘನಾಶಿನಿಯ ಮಾಲಿನಿ ಗಣಪತಿ ಅಂಬಿಗ ಹಾಗೂ ಪೈರಗದ್ದೆ ನಿವಾಸಿ ಶ್ರೀಧರ ಗಣೇಶ ಕುಮಟಾಕರ ವಂಚನೆ ಪ್ರಕರಣದ ಆರೋಪಿಗಳಾಗಿದ್ದಾರೆ. ಆರೋಪಿಗಳು 2022 ರ ಅಗಸ್ಟ ತಿಂಗಳಲ್ಲಿ ಸ್ಟಾಫ್ ನರ್ಸ ಆಗಿ ಸರ್ಕಾರಿ ನೌಕರಿ ಕೊಡಿಸುವುದಾಗಿ 3 ಲಕ್ಷರೂ ನಗದು ಪಡೆದುಕೊಂಡಿದ್ದು ಈ ಬಗ್ಗೆ ಲಿಖಿತವಾಗಿ ಬರೆದು ಕೊಟ್ಟಿದ್ದರು. ಆರೋಪಿಗಳು ತಾವೇ ಸೃಷ್ಟಿಸಿದ ಗಣಪತಿ ಜಾಬ್ಸ ಲಿಂಕ್ಸ ಎಂಬ ಹೆಸರಿನ ವಾಟ್ಸಪ್ ಗುಂಪಿನಲ್ಲಿ ಕಾಲಕಾಲಕ್ಕೆ ಇಂತಹ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾ ಬಂದಿದ್ದಾರೆ. ಹಣ ಪಡೆದುಕೊಂಡು 2 ವರ್ಷವಾದರೂ ನೌಕರಿ ಕೊಡಿಸದಿದ್ದಾಗ ಹಣ ಮರಳಿಸುವಂತೆ ಆರೋಪಿಗಳಿಗೆ ಶೋಭಾ ಅಂಬಿಗ ದುಂಬಾಲು ಬಿದ್ದಿದ್ದಾರೆ. ಬಳಿಕ ಕೇವಲ 1ಲಕ್ಷದ 35 ಸಾವಿರರೂಗಳನ್ನು ಮರಳಿಸಿದ್ದು ಉಳಿದ ಹಣ ಕೊಟ್ಟಿಲ್ಲ ಎಂದು ಕುಮಟಾ ಠಾಣೆಗೆ ಏಪ್ರಿಲ್ 30 ರಂದು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆದಿದ್ದು ಈವರೆಗೆ ಯಾವುದೇ ಆರೋಪಿ ಬಂಧನವಾಗಿಲ್ಲ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net