ತೂಕ, ಅಳತೆಯಲ್ಲಿನ ವಂಚನೆಗೆ ತಡೆಯಿಲ್ಲ

FotoJet (3)
Published on

ನಿಗದಿತ ಗುರಿ ಸಾಧಿಸಿದ ಕಾನೂನು ಮಾಪನ ಇಲಾಖೆ ತಪಾಸಣೆ, ದಂಡ ವಸೂಲಿ ಕಾರ್ಯ ಹೆಚ್ಚಿಸಲು ಒತ್ತಾಯ

ಚಿಕ್ಕಬಳ್ಳಾಪುರ: ತೂಕ ಮತ್ತು ಅಳತೆಯಲ್ಲಿನ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಪಾಸಣೆ ಮತ್ತು ಮೊಕದ್ದಮೆ ದಾಖಲಿಸುವಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ಸಾಧನೆ ಕಂಡು ಬಂದಿಲ್ಲ.

ಪ್ರಸಕ್ತ 2024ನೇ ಸಾಲಿನಲ್ಲಿ 800 ತಪಾಸಣೆಯ ಗುರಿ ಪೈಕಿ 691 ಕಾರ್ಯಾಚರಣೆ ಕೈಗೊಂಡಿದ್ದರೆ, ಮೊಕದ್ದಮೆ ದಾಖಲಿನ 286 ಗುರಿ ಪೈಕಿ 94 ಪ್ರಕರಣಗಳು (ನವೆಂಬರ್ ಅಂತ್ಯಕ್ಕೆ) ದಾಖಲಾಗಿವೆ. ಹಾಗೆಯೇ ಕಳೆದ 2023ನೇ ಸಾಲಿನಲ್ಲಿ 720 ತಪಾಸಣೆಯ ಗುರಿ ಪೈಕಿ 601 ಕಾರ್ಯಾಚರಣೆ ಕೈಗೊಂಡಿದ್ದರೆ, ಮೊಕದ್ದಮೆ ದಾಖಲಿನ 336 ಗುರಿ ಪೈಕಿ 133 ಪ್ರಕರಣಗಳು (ನವೆಂಬರ್ ಅಂತ್ಯಕ್ಕೆ) ದಾಖಲಾಗಿವೆ. ಎರಡು ಸಾಲಿನಲ್ಲೂ ಅಲ್ಪ ಸಾಧನೆ ತೋರಿರುವುದು ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ.

ಜಿಲ್ಲೆಯಲ್ಲಿ ಕಾನೂನು ಮಾಪನ ಇಲಾಖೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಹಾಯಕ ನಿಯಂತ್ರಕರು, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ನಿಯಂತ್ರಕರ ಕಚೇರಿ ಇದೆ. ತೂಕ, ಅಳತೆಯ ಮಾಪನದಲ್ಲಿ ಗ್ರಾಹಕರಿಗೆ ವಂಚನೆ, ಕಾಯ್ದೆ ನಿಯಮಗಳು, ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಗಾಗ ವಹಿವಾಟುದಾರರ ಸಭೆಗಳನ್ನು ಆಯೋಜಿಸಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಅನಿರೀಕ್ಷಿತ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸುತ್ತಿದ್ದು ಇವುಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು. ಕಾಯ್ದೆಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಶ್ನಿಸುವವರ ವಿರುದ್ಧವೇ ಮುಗಿಬೀಳುವ ವ್ಯಾಪಾರಿಗಳು

ಸರಕು ಸಾಮಗ್ರಿಗಳ ಅಂಗಡಿ, ಸಂಸ್ಥೆಗಳಲ್ಲಿ ಕಡ್ಡಾಯವಾಗಿ ವಸ್ತುಗಳನ್ನು ತೂಕ ಮಾಡಲು ಎಲೆಕ್ಟ್ರಾನಿಕ್ ಯಂತ್ರವನ್ನೇ ಬಳಸಬೇಕು. ಹಿಂದಿನ ಮಾದರಿಯಲ್ಲಿ ತೂಕದ ಕಲ್ಲುಗಳ ಆಧಾರದ ಮೇಲೆ ಅಳತೆಗೆ ಅವಕಾಶ ಇಲ್ಲ. ಆದರೂ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ನಿಲ್ಲುತ್ತಿಲ್ಲ. ಕೆಲ ನ್ಯಾಯಬೆಲೆ, ಖಾಸಗಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಿಸದ, ಅಡ್ಡಲಾಗಿ ಇತರ ವಸ್ತುಗಳ ನಡುವೆ ಮಾಪನ ಯಂತ್ರಗಳನ್ನಿಡಲಾಗುತ್ತಿದೆ. ಡಿಜಿಟಲ್ ಸಂಖ್ಯೆ ಏರುಪೇರು, ಗ್ರಾಹಕರ ಕಣ್ಣಿಗೆ ಕಾಣದಂತೆ ಇತರ ವಸ್ತುಗಳನ್ನು ಇಟ್ಟು ತೂಕ ಹೆಚ್ಚಿಸುವ ಕುತಂತ್ರಗಳನ್ನು ಅನುಸರಿಸಲಾಗುತ್ತಿದೆ. ಕೆಲವೆಡೆ ಮೊದಲೇ ಪ್ಯಾಕಿಂಗ್ ಮಾಡಿ, ತೂಕ ಹಾಕದೇ ನೇರವಾಗಿ ಗ್ರಾಹಕರಿಗೆ ವಿತರಿಸುವಂತಹ ಪ್ರಕರಣಗಳೂ ನಡೆಯುತ್ತಿವೆ. ಇದನ್ನು ಪ್ರಶ್ನಿಸುವವರ ವಿರುದ್ಧ ವ್ಯಾಪಾರಿಗಳು ಮುಗಿ ಬೀಳುತ್ತಿದ್ದು ಜನಸಾಮಾನ್ಯರು ಹೊಂದಾಣಿಕೆಯಲ್ಲಿ ಸುಮ್ಮನಾಗುವಂತಾಗಿದೆ.

ತೂಕ ಮತ್ತು ಅಳತೆ ಪರಿಕರಗಳ ಪ್ರಮಾಣ ಪತ್ರ, ನವೀಕರಣ ಪತ್ರ ವಿತರಣೆಯ ಶುಲ್ಕ (ಸತ್ಯಾಪನಾ ದಾಖಲೆ ಶುಲ್ಕ), ನಿಯಮ ಉಲ್ಲಂಘನೆಗೆ ದಂಡ (ಅಭಿಸಂಧಾನ ಶುಲ್ಕ) ವಿಧಿಸುವುದರಿಂದ ಇಲಾಖೆಗೆ ಆದಾಯ ಬರುತ್ತಿದೆ. ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 90,71,456 ರೂ. ಸತ್ಯಾಪನಾ ಶುಲ್ಕ ಗುರಿ ಪೈಕಿ 72,33,505 ರೂ., 2023ನೇ ಸಾಲಿನಲ್ಲಿ 71,53,788 ರೂ. ಸತ್ಯಾಪನಾ ಶುಲ್ಕ ಗುರಿ ಪೈಕಿ 75,63,202 ರೂ. ವಸೂಲಿಯಾಗಿದೆ. ಹಾಗೆಯೇ 2024ನೇ ಸಾಲಿನಲ್ಲಿ 4,56,000 ಅಭಿಸಂಧಾನ ಶುಲ್ಕ ವಸೂಲಿ ಗುರಿಗೆ ಬದಲಾಗಿ 2,25,000 ರೂ., 2023ನೇ ಸಾಲಿನಲ್ಲಿ 5,04,000 ಅಭಿಸಂಧಾನ ಶುಲ್ಕ ವಸೂಲಿ ಗುರಿಗೆ ಬದಲಾಗಿ 3,11,000 ರೂ. (ನವೆಂಬರ್ ಅಂತ್ಯಕ್ಕೆ) ವಸೂಲಿಯಾಗಿದೆ.

ಆಟೋ ಮೀಟರ್‌ಗಳೇ ಸರಿ ಇಲ್ಲ

ಜಿಲ್ಲೆ ವ್ಯಾಪ್ತಿಯಲ್ಲಿನ ಅನೇಕ ಆಟೋಗಳಲ್ಲಿ ವಿದ್ಯುನ್ಮಾನ ಮೀಟರ್‌ಗಳೇ ಇಲ್ಲ. ಇದ್ದರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಚಾಲಕರು ಕೇಳುವ ಹಣವನ್ನು ಗ್ರಾಹಕರು ಪಾವತಿಸಬೇಕಾಗಿದೆ. ಒಂದು ವೇಳೆ ನಿರಾಕರಿಸಿದರೆ ವಾಪಸ್ ಕಳುಹಿಸಲಾಗುತ್ತದೆ. ಸೇವೆಯನ್ನು ಒದಗಿಸುವುದಿಲ್ಲ. ಇನ್ನು ಪೆಟ್ರೋಲ್ ಬಂಕ್‌ಗಳಲ್ಲಿ ಪಾವತಿಯ ಮೊತ್ತಕ್ಕೆ ಅನುಗುಣವಾಗಿ ವಾಹನಗಳಿಗೆ ತುಂಬಿಸುವ ಡೀಸೆಲ್, ಪೆಟ್ರೋಲ್ ಇಂಧನ ಪ್ರಮಾಣದ ಬಗ್ಗೆಯೂ ವ್ಯಾಪಕವಾಗಿ ಅನುಮಾನಗಳು ವ್ಯಕ್ತವಾಗುತ್ತಲೇ ಇರುತ್ತವೆ. ಸ್ಥಳೀಯ ಚಿನ್ನಾಭರಣ ಮಾರಾಟ ಅಂಗಡಿಗಳಲ್ಲೂ ಮಿಲಿ ಗ್ರಾಮಗಳಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ ಎನ್ನಲಾಗುತ್ತಿದೆ.

"ಗ್ರಾಹಕರಿಗೆ ಸರಕು ಮತ್ತು ಸೇವೆ ವಹಿವಾಟಿನಲ್ಲಿ ಯಾವುದೇ ಕಾರಣಕ್ಕೂ ವಂಚನೆಯಾಗಬಾರದು. ಪಾರದರ್ಶಕತೆ ಕಾಪಾಡಬೇಕು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರಂತರವಾಗಿ ತಪಾಸಣೆ, ಪ್ರಕರಣ ದಾಖಲು, ದಂಡ ವಸೂಲಿ ಪ್ರಕ್ರಿಯೆ ನಡೆಸಬೇಕು. ಜಾಗೃತಿ ಕಾರ್ಯಕ್ರಮಗಳು ವರ್ಷಕ್ಕೊಮ್ಮೆ ಮಾತ್ರ ಎಂಬಂತೆ ಸೀಮಿತವಾಗಬಾರದು." - ಎನ್.ಮಂಜುನಾಥ್ ವಕೀಲ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net