

ಚಿಕ್ಕಬಳ್ಳಾಪುರ: ಭೂ ಸ್ವಾಧೀನ ಪರಿಹಾರದ ಹೆಸರಿನಲ್ಲಿ ಖದೀಮರು ಜಿಲ್ಲಾಡಳಿತ ಭವನದಲ್ಲಿಯೇ 1.6 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಬಾಗೇಪಲ್ಲಿ ಮೂಲದ ವೈ.ಶ್ರೀನಿವಾಸರೆಡ್ಡಿ ವಂಚನೆಗೊಳಗಾದವರು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಅಧಿಕಾರಿಗಳು ಎಂಬುದಾಗಿ ಹರೀಶ್ ರೆಡ್ಡಿ ಮತ್ತು ವಿಜಯಕಾಂತ್ ರೆಡ್ಡಿ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಶ್ರೀನಿವಾಸರೆಡ್ಡಿ ಅವರಿಗೆ ಪರಿಚಯ ಮಾಡಿಕೊಂಡಿದ್ದಾರೆ. ಹಾಗೆಯೇ ಭೂ ಸ್ವಾಧೀನದ ಜಮೀನಿಗೆ 28 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿ ನಂಬಿಸಿದ್ದಾರೆ.
ಕೊನೆಗೆ ಹಣವನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಗೆ ದಸ್ತಾವೇಜುಗಳ ಜತೆಗೆ ಸೂಕ್ತ ದಾಖಲೆಗಳನ್ನು, ಬಾಂಡ್ ಬರೆದುಕೊಡಲು 1.6 ಲಕ್ಷ ರೂಪಾಯಿ ತೆಗೆದುಕೊಂಡ ಬರಲು ತಿಳಿಸಿದ್ದರು. ಇದನ್ನು ನಂಬಿ ಜಿಲ್ಲಾಡಳಿತ ಭವನಕ್ಕೆ ಬಂದ ಶ್ರೀನಿವಾಸ್‌ರೆಡ್ಡಿಗೆ, ಸಾಹೇಬರ ಎದುರು ಹಣ ಪಡೆಯಲು ಆಗುವುದಿಲ್ಲ. ಡಿಸಿ ಕಚೇರಿಯಲ್ಲಿ ಸಭೆ ಮುಗಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಅದರಂತೆ ವಿಜಯಕಾಂತ್ ರೆಡ್ಡಿ ಹೆಸರಿನ ವ್ಯಕ್ತಿ ಹಣ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಯಾವುದೇ ಪರಿಹಾರದ ಧನದ ಚೆಕ್ ನೀಡದಿರುವುದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಬಾಗೇಪಲ್ಲಿ ಸೇರಿದಂತೆ ವಿವಿಧೆಡೆ ನಾನಾ ಉದ್ದೇಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ನಡುವೆ ವಂಚಕರು ಹಣವನ್ನು ಲಪಟಾಯಿಸಲು ಅಧಿಕಾರಿಗಳ ಹೆಸರಿನಲ್ಲಿ, ಅದರಲ್ಲೂ ಜಿಲ್ಲಾಡಳಿತ ಭವನದಲ್ಲಿ ಸುಳ್ಳುಗಳನ್ನು ಹೇಳಿ ವಂಚಿಸಿದ್ದಾರೆ.