ಬೂಸ್ಟರ್ ಹೆಸರಲ್ಲಿ ಸೈಬರ್ ಡೋಸ್!; ಹೊಸ ಹೊಸ ರೀತಿಯಲ್ಲಿ ವಂಚನೆ..

Vaccine
Published on

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಜನರನ್ನು ವಂಚಿಸಲು ವಂಚಕರು ಹೊಸ ಹೊಸ ರೀತಿಯಲ್ಲಿ ಹೊಂಚು ಹಾಕುತ್ತಲೇ ಇರುತ್ತಾರೆ. ಈ ಬಾರಿ ಕರೊನಾ ಮೂರನೇ ಅಲೆಯನ್ನೆ ಸರಕನ್ನಾಗಿಸಿಕೊಂಡ ವಂಚಕರು ಬೂಸ್ಟರ್ ಡೋಸ್ ಹೆಸರಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದಾರೆ. ಈ ಹಿಂದೆ ಕರೊನಾ ಲಸಿಕೆ ಹೆಸರಲ್ಲಿ ಹಲವರಿಗೆ ಮಕ್ಮಲ್ ಟೋಪಿ ಹಾಕಿದ್ದ ವಂಚಕರು ಇದೀಗ ಬೂಸ್ಟರ್ ಡೋಸ್ ಜಪ ಶುರು ಮಾಡಿದ್ದಾರೆ. ಮುಗ್ಧ ಜನರನ್ನು ಟಾರ್ಗೆಟ್ ಮಾಡುವ ಈ ನಯ ವಂಚಕರು ಸದ್ದಿಲ್ಲದೆ, ಲಕ್ಷ ಲಕ್ಷ ರೂ. ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಇದಕ್ಕಾಗಿ ಸಾವಿರಾರು ಜನರ ಮೊಬೈಲ್​ಫೋನ್ ನಂಬರ್​ಗಳನ್ನು ಸಂಗ್ರಹಿಸಿ, ಅವರ ಹೆಸರು, ವಿಳಾಸ, ಮತ್ತಿತರ ಮಾಹಿತಿಯನ್ನೂ ಕದ್ದಿರುತ್ತಾರೆ.

ಹೀಗೆ ಅಪರಿಚಿತರಿಗೆ ಕರೆ ಮಾಡುವ ವಂಚಕರು ತಾವು ಆರೋಗ್ಯ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ ಎಂದು ನಂಬಿಸುತ್ತಾರೆ. ನೀವು ಕರೊನಾ ಲಸಿಕೆ ಹಾಕಿಸಿಕೊಂಡಿದ್ದೀರಾ? ಎರಡೂ ಡೋಸ್ ಆಗಿದೆಯಾ? ಎಂದು ಪೀಠಿಕೆ ಹಾಕುತ್ತಾರೆ. ಆ ಕಡೆಯಿಂದ ಹೌದು ಎಂದು ತಲೆಯಾಡಿಸಿದರೆ ಮುಗೀತು. ನೀವು ಬೂಸ್ಟರ್ ಡೋಸ್​ಗೆ ಆಯ್ಕೆಯಾಗಿದ್ದೀರಿ. ಅದಕ್ಕಾಗಿ ನೀವು ಮೊದಲೇ ನೋಂದಣಿ ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ. ಬಳಿಕ ಆಧಾರ್ ಸಂಖ್ಯೆ, ಮತ್ತಿತರ ಮಾಹಿತಿ ಪಡೆಯುತ್ತಾರೆ. ಕೊನೆಗೆ ನಿಮ್ಮ ಮೊಬೈಲ್​ಫೋನ್​ಗೆ ಬಂದಿರುವ ಒಟಿಪಿ ತಿಳಿಸಿದರೆ ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ ಎಂದು ಒಟಿಪಿ ಪಡೆಯುತ್ತಾರೆ. ಬಳಿಕ ಕ್ಷಣಾರ್ಧದಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ. ಹೀಗೆ ಬೂಸ್ಟರ್ ಡೋಸ್ ಹೆಸರಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ವಂಚಿಸುವ ಯತ್ನ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಕೂಡಲೆ ಎಚ್ಚೆತ್ತುಕೊಂಡ ಆ ವ್ಯಕ್ತಿ ಕರೆಗೆ ಸ್ಪಂದಿಸಿಲ್ಲ. ಹಾಗಾಗಿ, ಅವರು ವಂಚನೆಗೆ ಒಳಗಾಗಿಲ್ಲ. ಆದರೆ, ಈ ಬಗ್ಗೆ ಅವರು ದೂರು ನೀಡಿಲ್ಲ.

ಬೂಸ್ಟರ್ ಡೋಸ್ ಹೆಸರಲ್ಲಿ ವಂಚಿಸುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಯಾವುದೇ ಕರೆ, ಸಂದೇಶ ಬಂದರೆ ಸಾರ್ವಜನಿಕರು ಪ್ರತಿಕ್ರಿಯಿಸಬಾರದು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬ್ಯಾಂಕ್ ಖಾತೆ ವಿವರ, ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. | ಸಾಹಿಲ್ ಬಾಗ್ಲಾ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net