

ಚಿಂತಾಮಣಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ದಿಂದ ರೈತರ ಜಮೀನಿನಲ್ಲಿ ವಿದ್ಯುತ್ ಪ್ರಸರಣ ಗೋಪುರ ನಿರ್ಮಾಣ ಮತ್ತು ವಿದ್ಯುತ್ ತಂತಿ ಹಾದು ಹೋಗಿರುವ ಕಾರಿಡಾರ್ ಲೈನ್ ಅಳವಡಿಸಿರುವುದಕ್ಕೆ ರೈತರಿಗೆ ನೀಡಬೇಕಾದ ಪರಿಹಾರದಲ್ಲಿ ವಂಚನೆಯಾಗಿದ್ದು, ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘ - ಹಸಿರುಸೇನೆ (ಪ್ರೊ. ನಂಜುಂಡಸ್ವಾಮಿ ಬಣ) ಯುವ ಘಟಕದ ಅಧ್ಯಕ್ಷ ಡಾ. ಬಿ.ಎ. ವಿನೋದ್‌ಕುಮಾರ್ ಗೌಡ ತಿಳಿಸಿದರು.
ನಗರ ಸಮೀಪದ ಗೋಪಸಂದ್ರದಲ್ಲಿ ರೈತರ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ ಪ್ರಸರಣ ಗೋಪುರಗಳ ವೀಕ್ಷಣೆಗೆ ಗ್ರಾಮದ ರೈತರೊಂದಿಗೆ ರೈತರ ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಜಮೀನು ಕಳೆದುಕೊಂಡಿರುವ ರೈತರಿಗೆ ಅಗತ್ಯ ಪರಿಹಾರ ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಕೆಪಿಟಿಸಿಎಲ್‌ನಿಂದ ಚಿಂತಾಮಣಿಯ 220/66 ಕೆವಿ ಕೇಂದ್ರದಿಂದ ಮಿಟ್ಟೇಮರಿಯ 220/66 ಕೆವಿ ವಿದ್ಯುತ್ ಕೇಂದ್ರದವರೆಗೆ 20 ಕೆವಿ ವಿದ್ಯುತ್ ಮಾರ್ಗಕ್ಕಾಗಿ ಹಾಲಿ ಇರುವ ಚಿಂತಾಮಣಿ-ಇರಗಂಪಲ್ಲಿ ಎಸ್‌ಸಿ ಲೇನ್, ಚಿಂತಾಮಣಿ-ಗಂಜಿಗುಂಟೆ ಡಿಸಿ ಲೇನ್, ತಲಕಾಯಿಲಬೆಟ್ಟ ಎಸ್‌ಸಿ ಲೇನ್, ಗೌರಿಬಿದನೂರು - ದಿಬ್ಬೂರಹಳ್ಳಿ - ಇರಗಂಪಲ್ಲಿ ಎಸ್‌ಸಿ ಲೇನ್ ಉಪಯೋಗಿಸಿಕೊಂಡು ಗೋಪುರ ನಿರ್ಮಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶದಂತೆ ರೈತರ ಜಮೀನಿನಲ್ಲಿ ಅಳವಡಿಸುವ ಗೋಪುರ ಮತ್ತು ಕಾರಿಡಾರ್‌ಗೆ ಅನುಗುಣವಾಗಿ ಭೂ ಪರಿಹಾರ ಮತ್ತು ಬೆಳೆ, ಮರ, ಮಾಲಿಕತ್ವದ ನಷ್ಟ ಪರಿಹಾರವನ್ನು ಸರ್ಕಾರ ನಿಗದಿಪಡಿಸಿರುವಂತೆ ರೈತರಿಗೆ ನೀಡಬೇಕು ಎಂದರು.
ಸರ್ಕಾರ ನಿಗದಿಪಡಿಸಿರುವಂತೆ ಗೋಪುರಕ್ಕೆ ಶೇ.100, ಕಾರಿಡಾರ್‌ಗೆ ಶೇ.60 ಪರಿಹಾರ ನೀಡಬೇಕು. ಆದರೆ, ರೈತರಿಗೆ ನಿಗದಿ ಮಾಡಿರುವುದಕ್ಕಿಂತ ಕಡಿಮೆ ಪರಿಹಾರ ನೀಡಿರುವುದಲ್ಲದೆ, ಕೆಲ ಜಮೀನಿನಲ್ಲಿ ಎರಡು ಮೂರು ಗೋಪುರ ನಿರ್ಮಾಣ ಮಾಡಿದ್ದರೂ ಒಂದು ಗೋಪುರಕ್ಕೆ ಪರಿಹಾರ ನೀಡಿ ಉಳಿದ ಗೋಪುರಗಳಿಗೆ ಪರಿಹಾರ ನೀಡದೆ ಗುತ್ತಿಗೆದಾರರು ವಂಚಿಸಿದ್ದಾರೆ. ಜತೆಗೆ ಗೋಪುರ ನಿರ್ಮಾಣ ವೇಳೆ ಯಂತ್ರಗಳನ್ನು ಬಳಸಿರುವುದರಿಂದ ಬೆಳೆಯೂ ನಾಶವಾಗಿದೆ ಎಂದು ದೂರಿದರು.
ಸಹಿ ಮಾಡಿದ ಖಾಲಿ ಪೇಪರ್ ವಾಪಸ್
ಗೋಪುರ ಮತ್ತು ಲೇನ್ ಎಳೆಯುವುದಕ್ಕೆ ಜಮೀನು ಮಾಲೀಕರಿಂದ ಖಾಲಿ ಛಾಪಾಕಾಗದದ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಇದೇರೀತಿ ಸಹಿ ಮಾಡಿಸಿಕೊಂಡಿರುವ ಪತ್ರಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಖಾಲಿಪತ್ರಗಳನ್ನು ರೈತರಿಗೆ ವಾಪಸ್ ಕೊಡಿಸಲಾಗಿದೆ ಎಂದು ವಿನೋದ್ ಕುಮಾರ್ ಹೇಳಿದರು.
ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಂಜುಂಡಪ್ಪ ಕಡತನಮಲೆ ಮತ್ತು ಜಿಲ್ಲಾಧ್ಯಕ್ಷ ಪ್ರಕಾಶ್ ಅವರು ಕೆಪಿಟಿಸಿಎಲ್ ಅಧಿಕಾರಿಗಳು ರೈತರಿಗೆ ವಂಚನೆ ಮಾಡಿರುವ ಬಗ್ಗೆ ವಿವರಿಸಿದರು. ಗ್ರಾಮದ ರೈತರಾದ ಮುನಿಯಮ್ಮ, ಬುಕ್ಕನಹಳ್ಳಿ ಆಂಜಿನಪ್ಪ ಮತ್ತು ಮುನಿಸ್ವಾಮಿ ಅವರು ಅನ್ಯಾಯದ ಬಗ್ಗೆ ತಿಳಿಸಿದರು.
ರೈತರಾದ ರಾಜೇಶ್, ಸೊಣ್ಣಪ್ಪರೆಡ್ಡಿ, ಶ್ರೀನಿವಾಸರೆಡ್ಡಿ, ಶ್ರೀನಿವಾಸ್, ಜಿ.ಆರ್. ಮಂಜುನಾಥ್, ರತ್ನಮ್ಮ, ನಾರಾಯಣಸ್ವಾಮಿ, ಲಗುಮಾರೆಡ್ಡಿ, ಮಂಜುನಾಥ್, ಬುಕ್ಕನಹಳ್ಳಿ ಅಂಜಿನಪ್ಪ, ಮುನಿಸ್ವಾಮಿ, ಸೋಮಶೇಖರ್, ರಾಧಮ್ಮ, ಅಶ್ವಥಮ್ಮ, ಪ್ರಮಿಳಮ್ಮ, ಮುನಿಯಮ್ಮ, ಸಿದ್ದಾರೆಡ್ಡಿ, ಗಿಡ್ಡಪ್ಪ, ಗೋಪಾಲಕೃಷ್ಣಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.