

ಮೈಸೂರು: ಪೊಲೀಸ್ ಕಾನ್ಸ್ಟೆಬಲ್ ಒಬ್ಬನನ್ನು ನಂಬಿ ಗಂಡನಿಗೆ ಡೈವೋರ್ಸ್ ಕೊಟ್ಟು ಪೇದೆಯೊಂದಿಗೇ ಇದ್ದ ಮಹಿಳೆಯೊಬ್ಬಳ ಬಾಳು ಈಗ ಗೋಳು ಎಂಬಂತಾಗಿದೆ. ಮದುವೆ ಆಗುವ ಆಮಿಷವೊಡ್ಡಿ ಮಾಡಬಾರದ್ದೆಲ್ಲ ಮಾಡಿದ ಈ ಕಾನ್ಸ್ಟೆಬಲ್ ಕಿತಾಪತಿ ಒಂದೆರಡಲ್ಲ.
ಈ ಪ್ರಕರಣ ಸಂಬಂಧ ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ. ಕೃಷ್ಣ ಹಾಗೂ ಈತನ ಮಗ ಕಿರಣ್ ವಿರುದ್ಧ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತಿ.ನರಸೀಪುರ ತಾಲೂಕಿನ ತಲಕಾಡು ಮೂಲದ ಮಹಿಳೆ ಸಂತ್ರಸ್ತೆ. ಈ ಅಪ್ಪ-ಮಗನಿಂದ ಹಲ್ಲೆಗೆ ಒಳಗಾಗಿ ಅನಾಥೆಯಂತೆ ಜಮೀನಿನಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿದ್ದಾಗ ಅಂದು ಬನ್ನೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಸಂತ್ರಸ್ತೆಗೆ, ಆ ಸಮಯದಲ್ಲಿ ಅಲ್ಲಿ ಆರೋಪಿ ಕೃಷ್ಣನ ಪರಿಚಯವಾಗಿದೆ. ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ ಕಾನ್ಸ್ಟೆಬಲ್ ಕೃಷ್ಣ, ಪತಿಗೆ ವಿಚ್ಛೇದನ ನೀಡು, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ ಪತಿಗೆ ವಿಚ್ಛೇದನ ನೀಡಿದ್ದಳು.
ನಂತರ ಕೃಷ್ಣ ಮೈಸೂರಿನ ಗೋಕುಲಂ ಎಂಬಲ್ಲಿ ಮನೆ ಬಾಡಿಗೆ ಪಡೆದು ಈ ಮಹಿಳೆಯೊಂದಿಗೆ ಅನಧಿಕೃತವಾಗಿ ಸಂಸಾರ ನಡೆಸಿದ್ದ. ಮದುವೆ ಆಗುವುದಾಗಿ ನಂಬಿಸುತ್ತಲೇ ದೈಹಿಕ ಸಂಪರ್ಕ ಬೆಳೆಸಿದ್ದ. ಮಾತ್ರವಲ್ಲ, ಸೊಸೈಟಿಯೊಂದರಿಂದ ಆಕೆಯ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಹಾಗೂ ಪ್ರತ್ಯೇಕವಾಗಿ 3 ಲಕ್ಷ ರೂ. ಸಾಲ ಪಡೆದಿದ್ದ.
ಇನ್ನು ದೈಹಿಕ ಸಂಪರ್ಕದಿಂದಾಗಿ ಆಕೆ ಗರ್ಭವತಿಯಾದಾಗ ಗುಟ್ಟು ಬಯಲಾಗುತ್ತದೆ ಎಂದು ಗರ್ಭಪಾತ ಮಾಡಿಸಿದ್ದ. ಹೀಗೆ ನಾಲ್ಕಾರು ವರ್ಷಗಳು ಉರುಳಿ ಹೋದರೂ ಆಕೆಯನ್ನು ಈತ ಮದುವೆಯಾಗದೆ ಸತಾಯಿಸಿದ್ದಾನೆ. ನಂತರ ಕ್ರಮೇಣ ಆತನ ನಡವಳಿಕೆಯಲ್ಲಿನ ಬದಲಾವಣೆ ಕಂಡು ಪರಿಶೀಲಿಸಿದಾಗ ಆತ ಇನ್ನೊಂದು ಮದುವೆ ಆಗಿರುವುದು ಗಮನಕ್ಕೆ ಬಂದಿತ್ತು.
ಈ ವಿಚಾರವಾಗಿ ಸಂತ್ರಸ್ತೆ ವಿರೋಧಿಸಿದಾಗ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಸಂತ್ರಸ್ತೆಗೆ, ಸಾಲ ಕೊಟ್ಟ ಹಣ ಹಿಂದುರಿಗಿದೆ. ಆದರೆ ಮದುವೆ ವಿಚಾರದಲ್ಲಿ ಕೃಷ್ಣ ಮತ್ತೆ ಕೈಕೊಟ್ಟಿದ್ದಾನೆ. ಈ ಬಗ್ಗೆ ನಂಜನಗೂಡಿನ ಬಳ್ಳೂರಹುಂಡಿ ಗ್ರಾಮದ ಜಮೀನಿನಲ್ಲಿ ಕೃಷ್ಣ ಇರುವ ವಿಚಾರ ತಿಳಿದು, ನ್ಯಾಯ ಕೇಳಲು ಹೋದ ಸಂತ್ರಸ್ತೆಗೆ ಅಪ್ಪ-ಮಗ ಇಬ್ಬರೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಪ್ಪನಿಗೆ ವಯಸ್ಸಾಯ್ತು ನಾನಿದ್ದೇನೆ... ಅಂತ ಮಗ ಕಿರಣ್ ಅವಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ. ಸಂತ್ರಸ್ತೆಯ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಕೃಷ್ಣ ಹಾಗೂ ಕಿರಣ್ ಎಸ್ಕೇಪ್ ಆಗಿದ್ದಾರೆ. ತೀವ್ರ ಹಲ್ಲೆಗೆ ಒಳಗಾದವಳನ್ನು ಗ್ರಾಮಸ್ಥರು ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೇದೆ ಕೃಷ್ಣ ಹಾಗೂ ಪುತ್ರ ಕಿರಣ್ ಮೇಲೆ ಕೊಲೆ ಬೆದರಿಕೆ, ವಂಚನೆ ಪ್ರಕರಣ ದಾಖಲಾಗಿದೆ.