ನಕ್ಸಲರು, ಮಾವೋವಾದಿಗಳ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ನಾಲ್ಕು ವಿಶೇಷ ಪಡೆ ರಚನೆ..

Naxal
Published on

ಬೆಂಗಳೂರು: ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುವ ಮಾವೋವಾದಿ ಹಾಗೂ ನಕ್ಸಲೀಯರನ್ನು ನಿಯಂತ್ರಣಕ್ಕೆ ತರಲು ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ಪಡೆ ರಚಿಸಿ ಆದೇಶ ಹೊರಡಿಸಿದೆ. ನಕ್ಸಲ್ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ವಿಶೇಷ ಪಡೆಗಳು ಕಾರ್ಯನಿರ್ವಹಿಸಲಿವೆ.

ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿಗಳು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದಾರೆ. ತನ್ನದೇ ಆದ ತತ್ವ ಸಿದ್ಧಾಂತದ ಆಧಾರದ ಮೇರೆಗೆ ಯುವಕರನ್ನು ಒಗ್ಗೂಡಿಸಿ ಸಂಘಟನಾತ್ಮಕವಾಗಿ ಹಾಗೂ ಗುಪ್ತವಾಗಿ ಕಾರ್ಯನಿರ್ವಹಿಸಿ ಹಲವು ದಶಕಗಳಿಂದಲೂ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಕ್ಸಲೈಟ್​ ಚಟುವಟಿಕೆ ಗೌಣವಾದರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಚನೆ ಮೇರೆಗೆ ದುಷ್ಟ ಕಾರ್ಯಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ಕರ್ನಾಟಕ ಪೊಲೀಸ್ ಮೀಸಲು ಪಡೆ (ಕೆಎಸ್‌ಆರ್‌ಪಿಎಫ್​) ಒಳಗೊಂಡಂತೆ ನಾಲ್ಕು ವಿಶೇಷ ತಂಡ ರಚಿಸಿದೆ.

ವಿಶೇಷ ತಂಡದ ಕಾರ್ಯನಿರ್ವಹಣೆ ಹೇಗೆ?: ಮಾವೋವಾದಿ, ನಕ್ಸಲೀಯರ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ನಾಲ್ಕು ವಿಶೇಷ ತಂಡಗಳು ಕೆಲಸ ಮಾಡಲಿವೆ. ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಾ, ಮಡಿಕೇರಿಯ ಕರಿಕೆ, ಮೈಸೂರು ಎಚ್.ಡಿ. ಕೋಟೆ ಬಳಿ ಬವಾಲಿ ಹಾಗೂ ಚಾಮರಾಜನಗರದ ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಪೊಲೀಸ್ ಪಡೆ ಕಾರ್ಯನಿರ್ವಹಿಸಲಿದೆ.

ಶ್ವಾನದಳಕ್ಕೂ ಅವಕಾಶ: ಕೇಂದ್ರದ ಅಧಿಸೂಚನೆಯಂತೆ ರಾಜ್ಯ ಸರ್ಕಾರ ವಿಶೇಷ ತಂಡ ಕಾರ್ಯನಿರ್ವಹಿಸಲಿದ್ದು ಒಟ್ಟು 267 ಪೊಲೀಸರನ್ನು ನಿಯೋಜಿಸಿದೆ. ಇಬ್ಬರು ಎಸಿಪಿಗಳು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಆಪರೇಷನ್ ಟೀಮ್ ಕಮಾಂಡರ್ ಆಗಿ 8 ಮಂದಿ, ಸಹಾಯಕ ಕಮಾಂಡರ್ ಆಗಿ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ಅಥವಾ ಆರ್‌ಎಸ್‌ಐ, 16 ಪಿಎಸ್‌ಐ, ಮಹಿಳಾ ಪಿಎಸ್‌ಐ 1 (ವೈರ್ ಲೇಸ್ ಇನ್ ಚಾರ್ಜ್) 4 ಮಹಿಳಾ ಎಎಸ್‌ಐ, 40 ಹೆಡ್‌ಕಾನ್ ಸ್ಟೇಬಲ್, 120 ಪೊಲೀಸ್ ಕಾನ್‌ಸ್ಟೇಬಲ್, 16 ಶ್ವಾನದಳ ಸಿಬ್ಬಂದಿ ಸೇರಿದಂತೆ ವಿವಿಧ ರೀತಿಯ ಸಿಬ್ಬಂದಿ ಸೇರಿ ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಿದೆ. ವಿಶೇಷವಾಗಿ ಬೆಲ್ಜಿಯಂ ಶೆರ್ಪರ್ಡ್ ಸೇರಿದಂತೆ ವಿವಿಧ ತಳಿಯ ಶ್ವಾನಗಳಿಗೂ ವಿಶೇಷ ತರಬೇತಿ ನೀಡಲಿದೆ.

ಗಡಿ ಭಾಗದಲ್ಲಿಯೇ ಕಾರ್ಯಾಚರಣೆ ಏಕೆ?: ಚಾಮರಾಜನಗರ, ಕೊಡಗು ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಲಿವೆ. ಈ ಪ್ರದೇಶಗಳು ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೂ ಗಡಿ ಪ್ರದೇಶ ಹತ್ತಿರವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ನುಸುಳುವ ಮಾವೋವಾದಿಗಳು ಯುವಕರ ತಲೆಕೆಡಿಸಿ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇಲ್ಲಿನ ಹಿಂಸಾತ್ಮಕ ಚಟುವಟಿಕೆಗಳಿಗೆ ನೆರೆ ರಾಜ್ಯಗಳ ಕಿಡಿಗೇಡಿಗಳು ಕೃತ್ಯವೆಸಗಿರುತ್ತಿರುವುದು ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ನಾಕಾಬಂದಿ ಹಾಕಿ ಗಸ್ತು ಕಾದರೂ ತಮ್ಮ ಚಾಣಾಕ್ಷತನ ಮೆರೆದು ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ಮಟ್ಟ ಹಾಕುವುದಕ್ಕಾಗಿ ವಿಶೇಷ ತಂಡಗಳನ್ನ ರಚಿಸಲಾಗಿದೆ.

ಮಾವೋವಾದಿಗಳ ಹಾಗೂ ಎಡಪಂಥೀಯರ ದುಷ್ಟ ಕಾರ್ಯಗಳ ಗಮನ ಕೇಂದ್ರಿಕರಿಸಿ ಈ ತಂಡಗಳು ಕಾರ್ಯಾಚರಣೆ ನಡೆಸಿ ಹೆಡೆಮುರಿಕಟ್ಟಲಿವೆ. ಅಸ್ಸಾಂ ಮಾವೋವಾದಿ ಹಾಗೂ ನಕ್ಸಲೀಯರ ಕೇಂದ್ರ ಸ್ಥಾನವಾಗಿದ್ದು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲೀಯರ ಕಾರಿಡಾರ್ ಪ್ರದೇಶವಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ವರದಿ ನೀಡಿತ್ತು. ಈ ವರದಿ ಆಧರಿಸಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ತಂಡ ರಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net