ವಂಚಕನನ್ನು ಅಕ್ರಮವಾಗಿ ಬಂಧಿಸಿ ಬೆದರಿಸಿ 15 ಲಕ್ಷ ರೂ. ವಸೂಲಿ; ಪಿಎಸ್​ಐ ಸೇರಿ ನಾಲ್ವರು ಪೊಲೀಸರ ಅಮಾನತು

Police Suspended
Published on

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ 36 ಗಂಟೆಗಳ ಕಾಲ ಠಾಣೆಯಲ್ಲಿರಿಸಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಸಿಪಿ ಆದೇಶಿಸಿದ್ದಾರೆ.

ಪುಲಿಕೇಶಿನಗರ ಠಾಣೆಯ ಪಿಎಸ್‌ಐ ರುಮಾನ್ ಪಾಷಾ, ಹೆಡ್ ಕಾನ್‌ಸ್ಟೆಬಲ್ ಲೇಪಾಕ್ಷಪ್ಪ, ಕಾನ್‌ಸ್ಟೆಬಲ್ ಲಕ್ಷ್ಮಣ್ ಮತ್ತು ಪುಲಿಕೇಶಿನಗರ ಠಾಣೆಯಿಂದ ಬಡ್ತಿಪಡೆದು ಜೆ.ಸಿ.ನಗರ ಠಾಣೆಗೆ ವರ್ಗಾವಣೆಯಾಗಿರುವ ಹೆಡ್ ಕಾನ್‌ಸ್ಟೆಬಲ್ ಗಿರೀಶ್ ಅಮಾನತುಗೊಂಡವರು.

ಅಕ್ರಮ ಬಂಧನ ಸಂಬಂಧ ಸಂತ್ರಸ್ತ ಕೊಂಡಪ್ಪ ಎಂಬುವವರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿಗೆ ಸೂಚನೆ ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಅವರು ಆರೋಪಿ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮೂವರ ವಿರುದ್ಧ ಇಲಾಖೆ ವಿಚಾರಣೆಗೂ ಸೂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಮಿಷನ್ ಆಸೆಗೆ ಸಂಧಾನ: ದೂರುದಾರ ಕೊಂಡಪ್ಪ ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದರೆಂಬ ಮಾಹಿತಿ ಇದೆ. ವ್ಯಕ್ತಿಯೊಬ್ಬರನ್ನು ವಂಚಿಸಿ 15 ಲಕ್ಷ ರೂ. ಪಡೆದಿದ್ದರು. ಹಣ ಕಳೆದುಕೊಂಡಿದ್ದ ವ್ಯಕ್ತಿ, ಠಾಣೆ ಮೆಟ್ಟಿಲೇರಿದ್ದರು. ಸಂಧಾನದ ಮೂಲಕ ಹಣ ವಾಪಸು ಕೊಡಿಸುವುದಾಗಿ ಪಿಎಸ್‌ಐ ರುಮಾನ್ ಪಾಷಾ ಹಾಗೂ ಸಿಬ್ಬಂದಿ ಹೇಳಿದ್ದರು. ಅದಕ್ಕಾಗಿ ಕಮಿಷನ್ ನೀಡುವಂತೆ ಬೇಡಿಕೆ ಇರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕೊಂಡಪ್ಪ ಅವರನ್ನು ಅಕ್ರಮವಾಗಿ ಬಂಧಿಸಿದ್ದ ಪಿಎಸ್‌ಐ, 36 ಗಂಟೆ ಠಾಣೆಯಲ್ಲಿ ಕೂರಿಸಿದ್ದರು. ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಕೊಂಡಪ್ಪ ಅವರಿಂದ 15 ಲಕ್ಷವನ್ನು ವ್ಯಕ್ತಿಗೆ ವಾಪಸು ಕೊಡಿಸಿದ್ದರು. ಆ ಹಣದಲ್ಲಿ ಪಿಎಸ್‌ಐ ಹಾಗೂ ಇತರರು ಕಮಿಷನ್ ಪಡೆದಿರುವ ಆರೋಪವಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net