

ಚಿಕ್ಕಬಳ್ಳಾಪುರ : ತಾಲೂಕಿನ ಗುಂಡ್ಲಗುರ್ಕಿಯ ಸಮೀಪ ಚಾಕು ತೋರಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂನ ಕೂಸುರು ಎಂ.ಪಳನಿ (29), ಕೊತ್ತಪೇಟೆಯ ಆರ್.ಹರಿ (31), ಆರ್ಬನ್ ಕಾಲನಿಯ ಸಿ.ಪಳನಿ (29) ಮತ್ತು ಡಿ.ಕೆ.ಪಾಳ್ಯ ಕಾಲನಿಯ ಈಶ್ವರ್ ಬಾಬು (24) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ
ೈನಾನ್ಸ್ ಸಂಸ್ಥೆಯೊಂದು ನೀಡಿದ್ದ ಸಾಲ ವಸೂಲಾತಿಗಾಗಿ ಎಂ.ಪಳನಿ ಮತ್ತು ಮಲ್ಲೇಶ್ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ತಾಲೂಕಿನ ಆಕಲತಿಮ್ಮನಹಳ್ಳಿಯಲ್ಲಿ ತೆರಳಿ ಹಣ ವಸೂಲಿ ಮಾಡಿಕೊಂಡು ಬರುತ್ತಿದ್ದಾಗ ಅಡ್ಡಗಟ್ಟಿದ ಆರೋಪಿಗಳು ಚಾಕು ತೋರಿಸಿ 19 ಸಾವಿರ ರೂ. ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಾಗಿ ಎಸ್‌ಪಿ ಕುಶಾಲ್ ಚೌಕ್ಸೆ ಅವರು ಎಎಸ್ಪಿ ರಾಜಾ ಇಮಾಮ್ ಖಾಸೀಂ, ಶಿವಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ಮಂಜುನಾಥ್ ಮತ್ತು ನಂದಿಗಿರಿಧಾಮ ಠಾಣೆಯ ಪಿಎಸ್‌ಐ ಎಂ.ಮಂಜುನಾಥ್ ಮತ್ತು ಗ್ರಾಮಾಂತರ ಠಾಣೆ ಪಿಎಸ್‌ಐ ವಿ.ಎನ್.ಗುಣವತಿ ಒಳಗೊಂಡ ತಂಡ ರಚಿಸಿದ್ದರು.
ಉಂಡ ಮನೆಗೆ ಕನ್ನ
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಪಳನಿ ಸ್ನೇಹಿತರ ಬಳಗದೊಂದಿಗೆ ಉಂಡ ಮನೆಗೆ ಕನ್ನ ಹಾಕಿದ್ದು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.