

ಹುನಗುಂದ: ಹುನಗುಂದ- ಮುದ್ದೇಬಿಹಾಳ ರಸ್ತೆಯ ಧನ್ನೂರ ಟೋಲ್ ನಾಕಾ ಬಳಿ ಗುರುವಾರ ನಡೆದ ಲಾರಿ- ಕಾರು ಮುಖಾಮುಖಿಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಲಕ್ಷ್ಮಣ ವಡ್ಡರ(55), ಬೆಲಪ್ಪ ಬಿರಾದಾರ(46), ಕಾರು ಚಾಲಕ ಮಹ್ಮದರಫೀಕ್ ಮುಲ್ಲಾ(23), ರಾಮಣ್ಣ ನಾಯಕಮಕ್ಕಳ(57) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಹುಲಿಗೆಮ್ಮನ ದೇವಸ್ಥಾನದ ದರ್ಶನ ಮುಗಿಸಿಕೊಂಡು ವಾಪಸ್ ಮುದ್ದೇಬಿಹಾಳಕ್ಕೆ ಆಗಮಿಸುತ್ತಿರುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಹುನಗುಂದ ಸಿಪಿಐ ಸುನೀಲ ಸವದಿ, ಪಿಎಸ್‌ಐ ಪ್ರಕಾಶ ಡಿ. ಭೇಟಿ ಪರಿಶೀಲಿಸಿದ್ದಾರೆ. ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಇನ್ನು ಕೇವಲ 20 ನಿಮಿಷ ಕಾರು ಕ್ರಮಿಸಿದ್ದರೆ ಮುದ್ದೇಬಿಹಾಳದ ಮನೆ ಸೇರುತ್ತಿದ್ದರು. ಆದರೆ, ವಿಧಿ ಆಟ ಅವರನ್ನು ಬಲಿಪಡೆದಿದೆ. ಮೃತ ವ್ಯಕ್ತಿಗಳ ಸಂಬಂಧಿಕರು ಮತ್ತು ಕುಟುಂಬಸ್ಥರು ಬೆಳಗ್ಗೆ ಗುಂಪು ಗುಂಪಾಗಿ ಆಗಮಿಸಿ ಶವಗಾರದ ರಸ್ತೆ ಬದಿಯಲ್ಲಿ ಕುಳಿತು ರೋಧಿಸುತ್ತಿರುವ ದೃಶ್ಯ ಮುಗಿಲು ಮುಟ್ಟಿತ್ತು.
ನಮ್ಮ ದೊಡ್ಡಪ್ಪ ಹುಲಿಯಂತೆ ಇದ್ದರೀ, ಹುಲಿಗೆಮ್ಮನ ದರ್ಶನ ಮಾಡಿಕೊಂಡ ಬಂದರೂ ದೇವರು ಅವರನ್ನು ಕಾಪಾಡಲಿಲ್ಲ. ಶಿವಾನಂದ ವಡ್ಡರ, ಮೃತ ವ್ಯಕ್ತಿ ಲಕ್ಷ್ಮಣ ಅವರ ತಮ್ಮನ ಮಗ
ಗುರವಾರ ಬೆಳಗಿನ ಜಾವ 2-3 ಗಂಟೆ ವೇಳೆಗೆ ಹುನಗುಂದ ಕಡೆಯಿಂದ ಮುದ್ದೇಬಿಹಾಳ ಕಡೆಗೆ ಅತಿ ವೇಗವಾಗಿ ಕಾರು ಚಲಾಯಿಸಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕೆ ಹೊಡೆದಿದ್ದೇ ಅಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.