

ವಿರಾಜಪೇಟೆ: ವಿರಾಜಪೇಟೆ ಸಮೀಪದ ಮೊದಲನೇ ಪೆರುಂಬಾಡಿಯ ಕೊರಗಜ್ಜ ದೇವಾಲಯದ ಬಳಿ ಶನಿವಾರ ರಾತ್ರಿ ಒಂದರ ಹಿಂದೆ ಒಂದರಂತೆ ನಾಲ್ಕು ಕಾರುಗಳು ಹಳ್ಳಕ್ಕೆ ಬಿದ್ದ ಪ್ರಕರಣ ನಡೆದಿದೆ.
ವಿರಾಜಪೇಟೆ ಮಾಕುಟ್ಟ ಹೆದ್ದಾರಿ ಮೊದಲನೇ ಪೆರುಂಬಾಡಿ ಬಳಿ ಮುಂದಿನ ವಾಹನ ಹಿಂಬಾಲಿಸುತ್ತಿದ್ದ ಸಂದರ್ಭ ನಾಲ್ಕು ವಾಹನಗಳೂ ಹಳ್ಳಕ್ಕೆ ಬಿದ್ದಿವೆ. ವೇಗದ ಚಾಲನೆ ಹಾಗೂ ವಾಹನಗಳ ನಡುವೆ ಅಂತರ ಇಲ್ಲದ್ದರಿಂದ ಈ ರೀತಿಯ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ. ಪ್ರಯಾಣಿಕರಿಗೆ ಸಣ್ಣ-ಪುಟ್ಟ ಪೆಟ್ಟಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.