ಚುನಾವಣಾ ಸಿಬ್ಬಂದಿಗೆ ಬೆದರಿಕೆ, ಬ್ಯಾಲೆಟ್ ಪೇಪರ್ ದೋಚಿದ ಪ್ರಕರಣಮತ್ತೊಬ್ಬನಿಗಾಗಿ ಶೋಧ
ಮಾಗಡಿ: ಚುನಾವಣೆ ಕರ್ತವ್ಯಕ್ಕೆ ಸಿಬ್ಬಂದಿ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಮತ್ತು ಕುದೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ದಾಸೇಗೌಡ, ಮನು, ಹೇಮಂತ, ಶ್ರೀನಿವಾಸ ಬಂಧಿತರು. ಎ1 ಆರೋಪಿ ಹುಳ್ಳೆನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮು ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ 1 ಲ್ಯಾಪ್ಟಾಪ್, 2 ಮೊಬೈಲ್, ಬ್ಯಾಲೆಟ್ ಪೇಪರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.27ರಂದು ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಎಂಪಿಸಿಎಸ್ ನಿರ್ದೆಶಕ ಸ್ಥಾನಕ್ಕೆ ಚುನಾವಣೆ ನಡೆಸಲು ಚುನಾವಣಾಧಿಕಾರಿ ಉಮೇಶ್ ಸೇರಿ 5 ಮಂದಿ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಹೊಸಪಾಳ್ಯ ಬಳಿ ಕಾರಿನಲ್ಲಿ ಹಿಂಬಾಲಿಸಿ ಬಂದ ಆರೋಪಿಗಳು ಚುನಾವಣಾ ಸಿಬ್ಬಂದಿ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್ಟಾಪ್, ಮೊಬೈಲ್ ದೋಚಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಉಮೇಶ್ ಮಾಗಡಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ದೂರಿನ ಆಧಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಮಾಗಡಿ ಮತ್ತು ಕುದೂರು ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ. ಚುನಾವಣಾಧಿಕಾರಿಗಳ ಕಾರಿನಲ್ಲಿ ಓರ್ವ ಮಹಿಳೆ ಇದ್ದು, ಕಿಡಿಗೇಡಿಗಳು ಕಾರು ಅಡ್ಡ ಹಾಕಿದಾಗ ಕಾರಿನಿಂದ ಕೆಳಗೆ ಬಿದ್ದ ಮಹಿಳೆ ಯಾರು ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಪಿಐ ಜಿ.ವೈ.ಗಿರಿರಾಜು, ಸಿಪಿಐ ಎ.ಪಿ.ಕುಮಾರ್, ಸಿಬ್ಬಂದಿಗಳಾದ ಬೀರಪ್ಪ, ಮುನಿಂದ್ರ, ಮುತ್ತುರಾಜು, ಸೂರ್ಯಕುಮಾರ್, ಗುರುಮೂರ್ತಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.