ಜನರನ್ನು ತಾಯಿಯಂತೆ ಸಲಹಬೇಕು ಸರ್ಕಾರ

17KMT1_Vitarane
Published on

ಕುಮಟಾ: ನಮ್ಮ ಡಬಲ್ ಇಂಜಿನ್ ಸರ್ಕಾರ ಬಡವರು, ದೀನ ದಲಿತರು, ಹಿಂದುಳಿದ ವರ್ಗಗಳು ಮತ್ತು ಎಲ್ಲ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ. ಸರ್ಕಾರಗಳು ತಾಯಿ ಸ್ಥಾನದಲ್ಲಿ ನಿಂತು ಜನರ ಕೆಲಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಪಟ್ಟಣದ ಮಣಕಿ ಮಹಾತ್ಮಾ ಗಾಂಧಿ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ 19.35 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಲ್ಲ ಜಿಲ್ಲೆಗಳಲ್ಲೂ ಫಲಾನುಭವಿಗಳ ಸಮಾವೇಶ ನಡೆಯುತ್ತಿದ್ದು ರಾಜ್ಯದ ಎಲ್ಲ ಸಮಾವೇಶಗಳಿಗಿಂತಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಫಲಾನುಭವಿಗಳ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.

ಜಿಲ್ಲೆಯಲ್ಲಿ 20 ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯವನ್ನು ವಿತರಿಸುತ್ತಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ 80 ಸಾವಿರ ಕುಟುಂಬಗಳಿಗೆ ಜಲ ಜೀವನ ಮಿಷನ್ ಅಡಿ ಮನೆಮನೆಗೆ ಗಂಗೆ ಯೋಜನೆಯಡಿ ಕುಡಿಯುವ ನೀರು ಕಲ್ಪಿಸುತ್ತಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರಾಜ್ಯದ 1 ಲಕ್ಷ 68 ಸಾವಿರ ಫಲಾನುಭವಿಗಳಿಗೆ 168 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಬೆಳಕು ಯೋಜನೆಯಡಿ ಜಿಲ್ಲೆಯ 13000 ಕುಟುಂಬಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ರೈತ ನಿಧಿ ಯೋಜನೆಯ ಮೂಲಕ ಎಲ್ಲ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುದಾನ ನೀಡಿದ್ದಾರೆ ಇದರಿಂದ ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಾಯಕಾರಿಯಾಗಲಿದೆ ಎಂದರು. ಜಿಲ್ಲೆಯಲ್ಲಿ 3000 ಸಾವಿರ ಶೌಚಗೃಹಗಳನ್ನು ಕೊಟ್ಟಿದ್ದೇವೆ. ಶೀಘ್ರದಲ್ಲೇ ಉತ್ತರ ಕನ್ನಡ ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇದೊಂದು ಐತಿಹಾಸಿಕ ದಿನ. ಪ್ರಧಾನಿ ಮೋದಿಯವರು ಕೇಂದ್ರದಲ್ಲಿ ಅಧಿಕಾರ ಹಿಡಿದು ಜನಧನ ಖಾತೆಯಿಂದ ಆರಂಭಿಸಿ ಫಲಾನುಭವಿಗಳಿಗೆ ನೇರ ಸೌಲಭ್ಯ ವಿತರಣೆಯವರೆಗೆ ನೈಜ ಜನಪರ ಕಾಳಜಿಯ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟ ಕಾಲದಲ್ಲೂ ದೇಶವನ್ನು ಎತ್ತಿಹಿಡಿದಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಕ್ಷೇತ್ರಕ್ಕೆ 2000 ಕೋಟಿ ರೂ.ಗಳಷ್ಟು ಅನುದಾನ ದೊರೆತಿದೆ ಎಂದರು.

ಬಳಿಕ ವಿವಿಧ ಇಲಾಖೆಯಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಶಾಸಕರಾದ ಸುನಿಲ ನಾಯ್ಕ, ರೂಪಾಲಿ ನಾಯ್ಕ, ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಪುರಸಭೆ ಅಧ್ಯಕ್ಷೆ ಅನುರಾಧ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್ಟ, ಹೊನ್ನಾವರ ಪಪಂ ಅಧ್ಯಕ್ಷೆ ಭಾಗ್ಯಶ್ರೀ ಮೇಸ್ತ, ಡಿಎಫ್​ಒ ರವಿಶಂಕರ ಸಿ., ಐಎಎಸ್ ಜುಬೀನ್ ಮಹೋಪಾತ್ರ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಿವಿಎಸ್​ಕೆ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಈಶ್ವರ ಕಾಂದೂ ಸ್ವಾಗತಿಸಿದರು. ಸುಧೇಶ ನಾಯ್ಕ, ಯೋಗೇಶ ಕೋಡ್ಕಣಿ, ಎಂ.ಎಂ.ನಾಯ್ಕ ನಿರ್ವಹಿಸಿದರು.

ಗ್ಯಾರಂಟಿಗೆ ಮರುಳಾಗಬೇಡಿ: ಇಂಧನ ಸಚಿವ ಸುನಿಲಕುಮಾರ್ ಮಾತನಾಡಿ, ನಾವಿಲ್ಲಿ ಆಶ್ವಾಸನೆ ಕೊಡಲು ಬಂದಿಲ್ಲ, ಸರ್ಕಾರ ಮಾಡಿದ್ದನ್ನು ಕೊಡಲು ಬಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಇಂದು ಸಾವಿರಾರು ಫಲಾನುಭವಿಗಳಿಗೆ ನೀಡುವ ಸಲುವಾಗಿ ಎಲ್ಲರನ್ನು ಒಂದು ಕಡೆ ಸೇರಿಸಿದ್ದೇವೆ. ಸರ್ಕಾರದಿಂದ ಜಾರಿಯಾದ ಯೋಜನೆಗಳಲ್ಲಿ ಶೇ.80 ರಷ್ಟು ಯೋಜನೆಗಳನ್ನು ಈಗಾಗಲೇ ಜನರಿಗೆ ತಲುಪಿಸಿದ್ದೇವೆ. ಕಾಂಗ್ರೆಸ್​ನವರು ಗ್ಯಾರಂಟಿ ಹೆಸರಿನಲ್ಲಿ ಮನೆಮನೆಗೆ ಬರುತ್ತಿದ್ದಾರೆ. ಕಳೆದ 75 ವರ್ಷಗಳಲ್ಲಿ ಕೊಡಲಾಗದ್ದರ ಸುಳ್ಳು ಭರವಸೆಗೆ ಮರುಳಾಗಿ ಅಮೂಲ್ಯವಾದ ವೋಟರ್ ಐಡಿ, ಆಧಾರ್ ಕಾರ್ಡ್ ಕಳೆದುಕೊಳ್ಳಬೇಡಿ ಎಂದರು.

ಅಭಿವೃದ್ಧಿ ಪಥದತ್ತ ದೇಶ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶಕ್ಕೆ ಸ್ವತಂತ್ರ ಬಂದಾಗ ಆಹಾರಕ್ಕಾಗಿ ಪರದಾಡುತ್ತಿದ್ದೆವು. ಇಂದು ನಾವು ಸ್ವಾವಲಂಬಿಯಾಗಿದ್ದೇವೆ. ಇದಕ್ಕಾಗಿ ದೇಶದ ರೈತರನ್ನು ಸ್ಮರಿಸಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಯಾಗಿದೆ. ಸೈನ್ಯದಲ್ಲೂ ಆತ್ಮವಿಶ್ವಾಸ ತುಂಬಿದೆ. ಸೇನಾ ಬಲವು ಸಶಕ್ತವಾಗಿದೆ. ಅಭಿವೃದ್ಧಿ ಪಥದತ್ತ ದೇಶ ಸಾಗುತ್ತಿದೆ. ಭಾರತ ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಂತಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಕಾರ್ಯವೈಖರಿಯೇ ಕಾರಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net