

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಭೀಕರ ಬರದ ಮಧ್ಯೆ ರೈತರ ವಿದ್ಯುತ್ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತ ಮಾಡಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರ‍್ಯಕರ್ತರೊಂದಿಗೆ ರೈತರು ಶುಕ್ರವಾರ ವಡಗೇರಾ ವಿದ್ಯುತ್ ವಿತರಣಾ ಕೇಂದ್ರದ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಣಗೌಡ ಹಗರಟಗಿ, ಏಕಾಏಕಿ ಜಿಲ್ಲಾಡಳಿತ ಮತ್ತು ಜೆಸ್ಕಾಂ ಇಲಾಖೆ ವಡಗೇರಾ ತಾಲೂಕಿನ ಕೃಷ್ಣಾ ನದಿ ತೀರದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಭತ್ತ, ಹತ್ತಿ, ಕಬ್ಬು, ಮೆಣಸಿನಕಾಯಿ ಮತ್ತು ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಆದರೆ ಇವುಗಳಿಗೆ ನೀರೊದಗಿಸಲು ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಈ ಬೆಳೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಕೈಗೊಂಡ ಈ ನಿರ್ಧಾರವನ್ನು ಕೂಡಲೇ ಕೈಬಿಟ್ಟು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಗುರುನಾಥರಡ್ಡಿ ಕದರಾಪುರ, ಶಿವಶಂಕರ ಪಾಟೀಲ್ ಶಿವಪುರ, ಶಂಕರಪ್ಪ ರೊಟ್ನಡಗಿ, ಸುಗೂರಪ್ಪಗೌಡ ಕೋಡಾಲ, ಪಂಪಾರೆಡ್ಡಿ ಕೋಡಾಲ, ನಾಗರಾಜಗೌಡ ಶಿವಪುರ ಇತರರಿದ್ದರು.