ವಿದ್ಯಾರ್ಥಿಗಳಿಂದ ಮಾತ್ರ ಭ್ರಷ್ಟಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದ ಸಂತೋಷ್ ಹೆಗ್ಡೆ

SanthoshHegde
Published on

ತುಮಕೂರು: ಭವಿಷ್ಯ ಭಾರತದ ಪ್ರಜೆಗಳಾದ ವಿದ್ಯಾರ್ಥಿಗಳಿಂದ ಮಾತ್ರ ಭ್ರಷ್ಟಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ ಮತ್ತು ಯೋಜನೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮೌಲ್ಯಗಳ ಕುಸಿತದ ಪರಿಣಾಮದಿಂದ ಲಂಚಕೋರತನ, ಭ್ರಷ್ಟಾಚಾರ ಹೆಚ್ಚಾಗಿದೆ. ಅರ್ಹತೆ ಇಲ್ಲದೆ ಮೇಲೆ ಬಂದ ಶ್ರೀಮಂತರ, ಅಧಿಕಾರ ವರ್ಗದವರ ಓಲೈಕೆಯಾಗುತ್ತಿದೆ ಎಂದರು.

ವಿದ್ಯಾರ್ಹತೆಯಿಂದ ಶ್ರೀಮಂತರಾಗಬೇಕು, ಉನ್ನತ ಸ್ಥಾನಕ್ಕೇರಬೇಕು. ಹಣದಿಂದ ಅರ್ಹತೆ ಪಡೆದಾಗಲೇ ಭ್ರಷ್ಟರಾಗಬೇಕೆಂಬ ಹುಳುಕು ಮನಸ್ಥಿತಿ ತಲೆದೋರುತ್ತದೆ. ದುರಾಸೆಯೇ ಎಲ್ಲಕ್ಕೂ ಕಾರಣವಾಗಿದೆ. ಭ್ರಷ್ಟಾಚಾರದಿಂದ ಸಮಾಜದಲ್ಲಿ ಪ್ರಾಮಾಣಿಕತೆಯ ವಿಷಯ ಮಾತನಾಡುವವನೇ ಪಾಪಿಯಂತಾಗಿದ್ದಾನೆ. ತೃಪ್ತಿಯ ಗುಣವೇ ಇಲ್ಲದ ಅಧಿಕಾರಿಗಳು, ಆಡಳಿತ ವರ್ಗದವರು ಹೆಚ್ಚಾಗಿದ್ದಾರೆ. ಕಾನೂನಿನ ವಿರುದ್ಧ ಹೋಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನಿಗದಿಪಡಿಸಬೇಕು ಎಂದು ಹೇಳಿದರು.

ಪ್ರಾಮಾಣಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಕಳೆದ ಕೆಲವು ವರ್ಷಗಳಿಂದ ಕುಸಿಯುತ್ತಲೇ ಇದೆ. ರಾಜ್ಯವಾರು ಚುನಾಯಿತ ಪ್ರತಿನಿಧಿಗಳ ಶೇ.29ರಷ್ಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಈ ವರ್ಗದವರೇ ಉನ್ನತ ಸ್ಥಾನವನ್ನು ಪಡೆದು ಆರ್ಥಿಕತೆಯ ಬಲವನ್ನು ದುರ್ಬಲವನ್ನಾಗಿಸುತ್ತಿದ್ದಾರೆ. ಸಮಾಜ ಬಯಸುವುದು ಇಂತಹ ಭ್ರಷ್ಟರನ್ನೆ ಎಂಬಂತಾಗಿದೆ. ಸರ್ಕಾರದಿಂದ ಸಂಬಳ ಪಡೆಯುವ ಪ್ರತಿಯೊಬ್ಬನೂ ಜನತಾ ಸೇವಕನೆ ಹೊರತು ಜನತಾ ಮಾಲೀಕನಲ್ಲ ಎಂದು ಹೇಳಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಸಮಾಜದ ಏಳ್ಗೆಗಾಗಿ ಶ್ರಮವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಲಂಚದ ಸ್ವರೂಪ, ಬೇಡಿಕೆ ದಿನದಿಂದ ದಿನ ತೀವ್ರವಾಗುತ್ತಿದೆ. ಭ್ರಷ್ಟರನ್ನು ನೇರವಾಗಿ ದಿಕ್ಕರಿಸುವ, ತಿರಸ್ಕರಿಸುವ ವ್ಯಕ್ತಿತ್ವ ಸಮಾಜದಲ್ಲಿ ಬೆಳೆಯಬೇಕು. ರಾಷ್ಟ್ರಪ್ರೇಮವೊಂದಿದ್ದರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ತಿಳಿಸಿದರು.

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ, ತುಮಕೂರು ವಿವಿಯ ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಡಾ. ಕೆ. ಪ್ರಸನ್ನ ಕುಮಾರ್ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಜಿ.ಬಸವರಾಜ ಜಿ., ಪ್ರೊ.ಬಿ.ರಮೇಶ್ ಪ್ರೊ. ಬಿ. ಟಿ. ಸಂಪತ್ ಕುಮಾರ್, ಪ್ರೊ. ಕೆ.ಜಿ.ಪರಶುರಾಮ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net