ಆಮ್​ ಆದ್ಮಿ ಸೇರಿದ ಮಾಜಿ ಸಿಎಂ ಧರ್ಮಸಿಂಗ್​ ಮೊಮ್ಮಗಳು!

Dharmasingh Granddaughter dharmasri
Published on

ಮೈಸೂರು: ಕಾಂಗ್ರೆಸ್​ ಮುಖಂಡ, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್​ ಅವರ ಅಣ್ಣನ ಮಗಳ ಪುತ್ರಿ ಧರ್ಮಶ್ರೀ ಅವರು ಆಮ್​ ಆದ್ಮಿ ಪಕ್ಷ (ಎಎಪಿ)ಕ್ಕೆ ಸೇರ್ಪಡೆಯಾದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರು ರಾಜೀವನಗರದ ನಿವಾಸಿಯಾಗಿರುವ, ಕಾನೂನು ಸಲಹೆಗಾರ್ತಿ ಧರ್ಮಶ್ರೀ ಅವರಿಗೆ ಎಎಪಿ ಟೋಪಿ ತೊಡಿಸಿ, ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಧಮಶ್ರೀ ಅವರು ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರ ಮಗಳು.

ಬೇರೆ ಪಕ್ಷಗಳು ಅಭಿವೃದ್ಧಿ ಕಡೆಗಣಿಸಿ ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ದೆಹಲಿ ಮಾದರಿಯಲ್ಲಿ ರಾಜ್ಯವೂ ಅಭಿವೃದ್ಧಿಯಾಗಬೇಕು. ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ನೀಡುತ್ತಿರುವುದರಿಂದ ಹಾಗೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸುತ್ತಿರುವುದರಿಂದ ಎಎಪಿ ಸೇರಿದ್ದೇನೆ ಎಂದು ಧರ್ಮಸಿಂಗ್​ ಮೊಮ್ಮಗಳು ಧರ್ಮಶ್ರೀ ಹೇಳಿದರು.

ಪೃಥ್ವಿರೆಡ್ಡಿ ಮಾತನಾಡಿ, ಪಂಚರಾಜ್ಯಗಳ ಚುನಾವಣೆಗೂ ಮುನ್ನ ಎಎಪಿ ದೆಹಲಿಗೆ ಮಾತ್ರ ಸೀಮಿತ, ಬೇರೆ ರಾಜ್ಯಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆದರೆ ಪಂಜಾಬ್​ನಲ್ಲಿ ಪಕ್ಷದ ಗೆಲುವು ಜನಾಂದೋಲನ, ರಾಜಕೀಯ ಕ್ರಾಂತಿಯಾಗಿ ಬದಲಾಯಿತು. ಪಂಜಾಬ್​ನಲ್ಲಿ 13 ವೈದ್ಯರು, 7 ವಕೀಲರು ಗೆಲುವು ಸಾಧಿಸಿರುವುದು ವಿಶೇಷ. ವಕೀಲರು, ವೈದ್ಯರು, ಇಂಜಿನಿಯರ್​ಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ಪಕ್ಷದಲ್ಲಿದ್ದಾರೆ. ಮೊಬೈಲ್​ ರಿಪೇರಿ ಮಾಡುವ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದವರನ್ನೇ ಸೋಲಿಸಿದ್ದಾರೆ. ಇದು ಪಕ್ಷದ ಕಾರ್ಯಕರ್ತರ ಶಕ್ತಿಯನ್ನು ತೋರಿಸುತ್ತದೆ. ಜನಸೇವೆ ಮಾಡಬೇಕು ಎನ್ನುವ ಸಾಮಾನ್ಯ ಜನರಲ್ಲಿ ರಾಜಕೀಯ ಎಂದರೆ ಬೇರೆ ಭಾವನೆ ಇರುವುದರಿಂದ ದೂರವೇ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಜಾಬ್​ ಗೆಲುವು ಸಾಮಾನ್ಯ ಜನರಿಗೆ ಆಶಾಕಿರಣವಾಗಿದ್ದು, ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ ಎಂದರು.

ಮೈಸೂರು ಭಾಗದಲ್ಲಿ ಮತದಾರರು ಮೂರೂ ಪಕ್ಷಗಳಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದಾರೆ. ಆದರೆ, ಜನರ ತೆರಿಗೆ ಹಣಕ್ಕೆ ತಕ್ಕಂತೆ ಮೂಲಸೌಲಭ್ಯ ಸಿಕ್ಕಿಲ್ಲ. ರಾಜ್ಯದ ಶೇ.64 ಶಾಲೆಗಳಲ್ಲಿ ಶೌಚಗೃಹ, ಕುಡಿಯುವ ನೀರು, ವಿದ್ಯುತ್​ ಸಮರ್ಪಕವಾಗಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಬದಲಾವಣೆ ಬಯಸಿದ್ದಾರೆ. ಪರ್ಯಾಯ ಪಕ್ಷದತ್ತ ಮುಖ ಮಾಡಿದ್ದಾರೆ. ಬದಲಾವಣೆ ಬಯಸುವವರು, ಅಭಿವೃದ್ಧಿ ಪರವಾಗಿರುವವರು ಎಎಪಿಯೊಂದಿಗೆ ಕೈಜೋಡಿಸಿ ಎಂದು ಪೃಥ್ವಿರೆಡ್ಡಿ ಮನವಿ ಮಾಡಿದರು.

ಎಎಪಿ ಜಿಲ್ಲಾಧ್ಯಕ್ಷೆ ಮಾಲವಿಕಾ ಗುಬ್ಬಿವಾಣಿ ಮಾತನಾಡಿ, ಪಂಜಾಬ್​ ಚುನಾವಣೆ ಬಳಿಕ ಎಎಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲೂ ಸ್ಪರ್ಧಿಸಲಾಗುವುದು. ಚುನಾವಣೆ ಸಮೀಪಿಸಿದ ಬಳಿಕ ಸಮೀಕ್ಷೆ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು. ಎಪಿಸಿ ಮಾಧ್ಯಮ ಸಂಚಾಲಕ ಜಿ.ಆರ್​.ವಿದ್ಯಾರಣ್ಯ, ವಿಜಯಶಾಸ್ತ್ರಿ ಮಠ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net