

ಬೇಲೂರು: ಕಾಡಾನೆಗಳ ಉಪಟಳದಿಂದ ಬೆಳೆ ನಾಶವಾಗಿರುವ ಬಗ್ಗೆ ಬೆಳೆಗಾರರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹಾಸನ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್, ಅರೇಹಳ್ಳಿ ಸಮೀಪದ ಬಿಳಗವಳ್ಳಿ ಗ್ರಾಮಕ್ಕೆ ಭಾನುವಾರ ಸಿಬ್ಬಂದಿಯೊಂದಿಗೆ ಭೇಟಿನೀಡಿ ಬೆಳೆಗಾರರ ಮನವಿ ಆಲಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದರು.
ಕಾಫಿ ಬೆಳೆಗಾರರ ಸಂಘದ ಚೇತನ್ ಪ್ರಕಾಶ್ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕೈದು ಗುಂಪಿನಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಫಿ ಸಾಕಷ್ಟು ತೋಟಗಳಿಗೆ ದಾಂಗುಡಿ ಇಡುತ್ತಿರುವುರಿಂದ ಹಲವಾರು ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಕಾಫಿ ಗಿಡಗಳು ನೆಲಕಚ್ಚಿವೆ. ಅಲ್ಲದೆ ಚಿಕ್ಕಮಗಳೂರು ಭಾಗದಿಂದ ಚೀಕನಹಳ್ಳಿ ಮಾರ್ಗವಾಗಿ ಕಾಡಾನೆಗಳ ಹಿಂಡು ಅರೇಹಳ್ಳಿ ಹೋಬಳಿಯ ಶಿರಗುರ, ಕಾನನಹಳ್ಳಿ ಗ್ರಾಮಗಳ ಮೂಲಕ ಬೇಲೂರು ತಾಲೂಕಿನ ಕಡೆಗೆ ಬರುತ್ತಿವೆ. ಇದಿರಂದಾಗಿ ಕಾಡಾನೆಗಳು ವಿವಿಧ ಗ್ರಾಮಗಳಿಗೆ ತೆರಳಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಬೆಳೆ ನಾಶಪಡಿಸುತ್ತಿವೆ. ಆದ್ದರಿಂದ ಕಾಡಾನೆಗಳನ್ನು ಮಲೆನಾಡು ಭಾಗದಿಂದ ಶಾಶ್ವತವಾಗಿ ಕಾಡಿಗಟ್ಟುವ ಕೆಲಸವನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಬೇಕಿದೆ. ಆದರೆ ಅಧಿಕಾರಿಗಳು ಇಲ್ಲಿ ಬೆಳೆಗಾರರ ಹಾಗೂ ರೈತರಿಗೆ ಬೆಳೆ ನಷ್ಟಕ್ಕೆ ಅಲ್ಪಸ್ವಲ್ಪ ಬೆಳೆ ಪರಿಹಾರ ನೀಡಿ ಕಣ್ಣೊರೆಸುವ ಕೆಲಸ ಮಾಡುತಿದ್ದಾರೆ. ಜತೆಗೆ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸುವುದರಿಂದ ಅವುಗಳು ಎಲ್ಲೆಂದರಲ್ಲಿ ಓಡಾಡಿ ಮತ್ತಷ್ಟು ಬೆಳೆ ನಷ್ಟಕ್ಕೆ ಕಾರಣವಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳನ್ನು ಅರಿತು ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ನಷ್ಟವಾಗದಂತೆ ಎಚ್ಚರ ವಹಿಸಿ ಕಾಡಾನೆಗಳನ್ನು ಶಾಶ್ವತವಾಗಿ ಓಡಿಸುವತ್ತ ಗಮನಹರಿಸಿ ಬೆಳೆಗಾರರಿಗೆ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲ ಕಲ್ಪಿಸುವತ್ತ ಮುಂದಾಗಬೇಕಿದೆ ಎಂದರು.
ಸಾರ್ವಜನಿಕರ ಹಾಗೂ ಬೆಳೆಗಾರರ ಮನವಿ ಆಲಿಸಿ ಮಾತನಾಡಿದ ಹಾಸನ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ತಾಲೂಕಿನ ಮಲೆನಾಡು ಭಾಗದಲ್ಲಿ ವಿಪರೀತ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಈಗಾಗಲೆ ಸ್ಥಳಾಂತರ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಕಾಡಾನೆಗಳನ್ನು ಶಾಶ್ವತವಾಗಿ ತಕ್ಷಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಕಷ್ಟಸಾಧ್ಯ. ಈಗಾಗಲೇ ಕಾಡಾನೆಗಳ ಹಿಂಡಿನಿಂದ ಉಂಟಾಗಿರುವ ಬೆಳೆನಷ್ಟದ ಬಗೆಗಿನ ಅಂಕಿ ಅಂಶಗಳನ್ನು ಸೂಕ್ತವಾಗಿ ಪರಿಶೀಲಿಸಲಾಗುವುದು. ಅಲ್ಲದೆ ಚಿಕ್ಕಮಗಳೂರು ಭಾಗದಿಂದ ಕಾಡಾನೆಗಳನ್ನು ಹಾಸನ ಸರಹದ್ದು ವ್ಯಾಪ್ತಿಗೆ ಓಡಿಸದಂತೆ ಅಧಿಕಾರಿಗಳ ಜತೆ ಚರ್ಚಿಸಿ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು.
ಬೇಲೂರು ವಲಯಾರಣ್ಯಾಧಿಕಾರಿ ವಿನಯ್ ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ, ಕಾಫಿ ಬೆಳೆಗಾರರಾದ ಹರೀಶ್.ಬಿ.ಪಿ, ಮಹೇಂದ್ರ, ಕಾಂತರಾಜು, ಪರಮೇಶ್, ಶಿವಪ್ಪ, ಮಲ್ಲಿಕಾರ್ಜುನ ಮತ್ತಿತರರಿದ್ದರು.