

ಕಾರವಾರ: ಸೈನಿಕರು ಗಡಿಯಲ್ಲಿ ದೇಶದ ಸಾರ್ವಭೌಮತ್ವಕ್ಕೆ ಹೋರಾಡುತ್ತಾರೆ. ಕಾಡಿನ ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಯನ್ನು `ಹಸಿರು ಯೋಧರು' ಎನ್ನಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್. ವಿಜಯ ಕುಮಾರ ಹೇಳಿದರು.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಸೋಮವಾರ ಕಾರವಾರ ಡಿಎಫ್‌ಒ ಕಚೇರಿ ಆವರಣದಲ್ಲಿನ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ ಅವರು ಮಾತನಾಡಿದರು.
ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯೂ ಅತಿಮುಖ್ಯ. ಭೂಮಿಯ ನೈಸರ್ಗಿಕ ಸಂಪತ್ತನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಅರಣ್ಯದ ವಿಸ್ತೀರ್ಣ ಕ್ಷೀಣಿಸುತ್ತಿದ್ದು, ಅರಣ್ಯವನ್ನು ವೃದ್ಧಿಸುವ ಜವಾಬ್ದಾರಿ ಹಸಿರು ಯೋಧರ ಮೇಲಿದೆ ಎಂದರು.
ಇದನ್ನೂ ಓದಿ:ಡಿಸಿ ಆದೇಶ-ತಂದೆಯ ಪಾಲನೆಗೆ ಒಪ್ಪಿದ ಮಗ
ಕಾರವಾರ ಡಿಎಫ್‌ಒ ಡಾ. ಪ್ರಶಾಂತಕುಮಾರ ಕೆ.ಸಿ., ಪ್ರತಿ ವರ್ಷ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತದೆ. ಕಳೆದ 5 ದಶಕಗಳಲ್ಲಿ ರಾಜ್ಯದಲ್ಲಿ 57 ಮಂದಿ ಕರ್ತವ್ಯ ನಿರತರಾದ ಹಸಿರು ಯೋಧರು ಹಲವಾರು ಕ್ಲೀಷ್ಟಕರ ಸನ್ನಿವೇಶದಲ್ಲಿ ಹುತಾತ್ಮರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ, ಕಾರವಾರ ಎಸಿಎಫ್ ಕೆ.ಸಿ. ಜಯೇಶ, ಅಂಕೋಲಾ ಎಸಿಎಫ್ ಕೃಷ್ಣ ಅಣ್ಣಯ್ಯ ಗೌಡ, ಆರ್‌ಎಫ್‌ಒಗಳಾದ ರಾಘವೇಂದ್ರ ನಾಯ್ಕ, ಪರೇಡ್ ಮುಖ್ಯಸ್ಥ ಅಜಿತ್ ದೇವರೆಡ್ಡಿ, ಮ್ಯಾನೇಜರ್ ವಿ.ಆರ್. ಗಾಂವ್ಕರ್ ಇತರರು ಇದ್ದರು.