ಡಿಸಿ ಆದೇಶ-ತಂದೆಯ ಪಾಲನೆಗೆ ಒಪ್ಪಿದ ಮಗ

Old man Narayan Naik
Published on

ಕಾರವಾರ:ಜೀವನಪೂರ್ತಿ ದುಡಿದು, ಜಮೀನು ಮಾಡಿ ಮಕ್ಕಳಿಗೆ ಹಂಚಿದ ತಂದೆಯೊಬ್ಬ ಅವರಿಂದ ತಿರಸ್ಕೃತನಾಗಿ ಡಿಸಿ ಕಚೇರಿಯ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡ ಘಟನೆ ತಾಲೂಕಿನ ಯಲ್ಲಾಪುರ ಶಿರನಾಲಾದಲ್ಲಿ ನಡೆದಿದೆ.
ಶಿರನಾಲಾ ಸಮೀಪ ಹುಲಿಮುಂಡಿಗೆಯ 82 ವರ್ಷದ ವೃದ್ಧ ನಾರಾಯಣ ಸಣ್ಣಯ್ಯ ನಾಯ್ಕ ತಮ್ಮ ಪ್ರಾಯದ ಕಾಲದಲ್ಲಿ ಅರಣ್ಯ ಸರ್ವೇ ನಂಬರ್ 30 ರಲ್ಲಿ ಸುಮಾರು 9 ಎಕರೆ ಅತಿಕ್ರಮಣ ಜಮೀನು ಮಾಡಿದ್ದಾರೆ. ಮನೆಯೊಂದನ್ನು ಕಟ್ಟಿದ್ದಾರೆ.

ಅವರಿಗೆ ನಾಲ್ವರು ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳಿದ್ದಾಳೆ. ತೋಟದಲ್ಲಿ ನಾರಾಯಣ ಅವರು ನೆಟ್ಟು ಬೆಳೆಸಿದ ಅಡಕೆ, ತೆಂಗು ಮುಂತಾದ ಗಿಡಗಳು ಅಲ್ಪ ಫಲ ಬರಲಾರಂಭಿಸಿವೆ.

ನಾರಾಯಣ ನಾಯ್ಕ ಕೆಲ ವರ್ಷಗಳ ಹಿಂದೆ ತಮ್ಮ ಒಟ್ಟೂ ಜಮೀನನ್ನು ಗಂಡು ಮಕ್ಕಳಿಗೆ ಹಂಚಿ ಕೊಟ್ಟಿದ್ದಾರೆ. ಇತ್ತೀಚೆಗೆ ಮಕ್ಕಳ ಹೆಸರಿನಲ್ಲಿ ಅತಿಕ್ರಮಣ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಜಿಪಿಎಸ್ ಕೂಡ ಆಗಿದೆ.

ನಾಲ್ಕನೇಯ ಮಗ ಅನಂತ ನಾರಾಯಣ ನಾಯ್ಕ ಅವರ ಜತೆ ವಾಸವಿದ್ದರು. ನಾಲ್ಕು ವರ್ಷದ ಹಿಂದೆ ಕಿರಿಯ ಮಗ ಅವರನ್ನು ಹೊರ ಹಾಕಿದ. ಜಮೀನು ಮಾಡಿದ ವೃದ್ಧ ಬೇರೆಯವರ ಮನೆಯಲ್ಲಿ ವಾಸವಿರುವ ಪರಿಸ್ಥಿತಿ ಉಂಟಾಗಿತ್ತು.

ತಮಗೆ ನ್ಯಾಯ ಕೊಡಿಸಿಕೊಡಿ ಎಂದು ಅವರು ನಾಲ್ಕು ದಿನದ ಹಿಂದೆ ಧೀರಜ್‌ ತೀನೈಕರ್ ಅವರ ಜತೆ ಡಿಸಿ ಗಂಗೂಬಾಯಿ ಮಾನಕರ್ ಅವರ ಬಳಿ ಬಂದು ಕಣ್ಣೀರು ಹಾಕಿದರು.

ಡಿಸಿ ಅವರು ಪ್ರಕರಣ ಬಗೆಹರಿಸುವಂತೆ ಯಲ್ಲಾಪುರ ತಹಸೀಲ್ದಾರರಿಗೆ ಆದೇಶಿಸಿದ್ದರು. ಯಲ್ಲಾಪುರ ತಹಸೀಲ್ದಾರ್ ಗುರುರಾಜ ಎಂ. ಅವರು ಸ್ಥಳಕ್ಕೆ ತೆರಳಿ ನಾಲ್ಕೂ ಮಕ್ಕಳನ್ನು ಕರೆದು ಮಾತುಕತೆ ನಡೆಸಿದ್ದರು. ಹಿರಿಯ ಮಗ ವೃದ್ಧರನ್ನು ಇಟ್ಟುಕೊಳ್ಳಲು ಒಪ್ಪಿದ್ದು, ಅವರು ಎಲ್ಲರ ಬಳಿ ಮುಚ್ಚಳಿಕೆ ಬರೆಸಿಕೊಂಡು ಪ್ರಕ್ರಣ ಇತ್ಯರ್ಥ ಮಾಡಲಾಗಿದೆ.

ಡಿಸಿ ಮೊರೆ ಹೋಗಿದ್ದೇಕೆ..?


ಹಿರಿಯ ನಾಗರಿಕರ ಹಿತರಕ್ಷಣಾ ಕಾಯ್ದೆ-2007 ರ ಅಡಿ ತಮಗೆ ನ್ಯಾಯ ಕೊಡಿಸುವಂತೆ ನಾರಾಯಣ ನಾಯ್ಕ 2017 ರಲ್ಲಿ ಶಿರಸಿ ಎಸಿ ಅವರಿಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಆಗಿನ ಎಸಿ ಆಕೃತಿ ಬನ್ಸಾಲ್ ಅವರು ಆದೇ ಮಾಡಿ ನಾರಾಯಣ ನಾಯ್ಕ ಅವರು ಕಟ್ಟಿದ ಮನೆಯಲ್ಲಿ ವಾಸ ಮಾಡಲು ಅವರು ಹಕ್ಕು ಹೊಂದಿದ್ದಾರೆ. ಅದಕ್ಕೆ ಯಾರೂ ಅಡ್ಡಿ ಮಾಡಬಾರದು.

ಅಲ್ಲದೇ ಅವರ ಉಪ ಜೀವನಕ್ಕಾಗಿ ಅತಿಕ್ರಮಣ ಜಮೀನಿನ ಬೆಳೆಗಳನ್ನು ಕೊಯ್ಯುವ ಅಧಿಕಾರವನ್ನೂ ಅವರು ಹೊಂದಿದ್ದಾರೆ ಎಂದು 2021 ರಲ್ಲಿ ಆದೇಶ ಮಾಡಿದ್ದರು.

ಆದರೆ, ಆದೇಶ ಪಾಲನೆಯಾಗದ ಬಗ್ಗೆ, ತಮಗೆ ಜೀವನಾಂಶ ಕೊಡಿಸುವಂತೆ ನಾರಾಯಣ ನಾಯ್ಕ ಮತ್ತೆ ಎಸಿ ಅವರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ನಂತರ ಆ ಸ್ಥಾನಕ್ಕೆ ಬಂದ ಆರ್.ದೇವರಾಜ್ ಅವರು, ನಾರಾಯಣ ನಾಯ್ಕ ಅವರಿಗೆ ಮನೆಯನ್ನು ಬಿಡಿಸಿಕೊಡುವುದು ಸಮಂಜಸ ಎನ್ನಿಸದು. ಅರ್ಜಿದಾರರು ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು ಎಂದು ಶಿಫಾರಸು ಮಾಡಿದ್ದರು. ಇದರಿಂದ ನಾರಾಯಣ ನಾಯ್ಕ ಡಿಸಿ ಕಚೇರಿ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net