ಡಿಎಫ್‌ಒ ಕಚೇರಿ ಗೇಟ್‌ಗೆ ಬೀಗ-ಕಟ್ಟೆ

20KWR8
Published on

ಜಯವಾಣಿ ಸುದ್ದಿಜಾಲ ಶಿರಸಿ
ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಲ್ಲಿನ ಡಿಎಫ್‌ಒ ಕಚೇರಿಗೆ ಗೇಟ್‌ ಗೆ ಬೀಗ ಹಾಕಿ ಅರಣ್ಯವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಅರಣ್ಯ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿದ್ದಾರೆ ಇದರ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದ ಅರಣ್ಯವಾಸಿಗಳು ಸುಮಾರು ನಾಲ್ಕು ತಾಸು ಧರಣಿ ನಡೆಸಿದರು. ಸರ್ಕಾರ, ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಅತಿಕ್ರಮಣದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಸಿಎಫ್ ಸ್ಥಳಕ್ಕಾಗಮಿಸಬೇಕು. ತಮ್ಮ ಬೇಡಿಕೆ ಈಡೇರಿಸುವುದಾಗಿ ಲಿಖಿತ ಹೇಳಿಕೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂತರ ಡಿಎಫ್‌ಒ ಅಜ್ಜಯ್ಯ ಲಿಖಿತ ಹೇಳಿಕೆ ಪಡೆದು ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಸಾವಿರಾರು ಜನ ಜಿಲ್ಲೆಯಲ್ಲಿದ್ದಾರೆ. ಅವರಿಗೆ ಕಾಯ್ದೆಯಲ್ಲಿ ಅವಕಾಶವಿದ್ದರೂ ಹಕ್ಕು ಪತ್ರ ನೀಡಿಲ್ಲ. ಬದಲಾಗಿ ಅತಿಕ್ರಮಣಗಳನ್ನು ತೆರವು ಮಾಡುವುದಾಗಿ ನ್ಯಾಯಾಲಯದಲ್ಲಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಅರಣ್ಯ ಅತಿಕ್ರಮಣದಾರರನ್ನು ರಕ್ಷಿಸುವುದಾಗಿ ಸರ್ಕಾರ ಪರಿಷ್ಕೃತ ಅಫಿಡವಿಟ್ ಸಲ್ಲಿಸಬೇಕು ಎಂಬ ಬಹು ದಿನಗಳ ಆಗ್ರಹವನ್ನು ಸರ್ಕಾರ ಈಡೇರಿಸುತ್ತಿಲ್ಲ. ಈ ನಡುವೆ ನಿಯಮ ಮೀರಿ ಅರಣ್ಯಾಽಕಾರಿಗಳು ಅತಿಕ್ರಮಣದಾರರ ಮೇಲೆ ದೌರ್ಜನ್ಯ ಮುಂದುವರಿಸಿದ್ದಾರೆ ಎಂದು ದೂರಿದರು.
ಡಿಎಫ್‌ಒ ಅಜ್ಜಯ್ಯ ಲಿಖಿತ ಉತ್ತರ ನೀಡಿ, ಅರಣ್ಯವಾಸಿಯ ಅಽಭೋಗ ಮತ್ತು ಸಾಗುವಳಿ ಇರುವ ಕ್ಷೇತ್ರಕ್ಕೆ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದಂತಹ ಆರಣ್ಯವಾಸಿಗಳಿಗೆ ಆತಂಕ ಮಾಡುವುದಿಲ್ಲ, ಒಕ್ಕಲೆಬ್ಬಿಸುವುದಿಲ್ಲ ಎಂದು ತಿಳಿಸಿದರು.
ಮಾಚೇಶ್ವರ ನಾಯ್ಕ ಬೇಡ್ಕಣಿ, ಲಕ್ಷಣ ಮಾಧ್ಯಕ್ಷನವರ, ಸುನೀಲ ನಾಯ್ಕ ಸಂಪಖಂಡ, ನೆಹರೂ ನಾಯ್ಕ ಬಿಳೂರು, ರಾಘು ಕವಂಚೂರು, ಪಾಂಡುರಂಗ ನಾಯ್ಕ ಬೆಳಕೆ, ಭೀಮ್ಶಿ ವಾಲ್ಮೀಕಿ, ದಿನೇಶ್ ನಾಯ್ಕ, ಎಂ.ಆರ್. ನಾಯ್ಕ ಕಂಡಾ, ಶಿವಾಜಿ, ಇಬ್ರಾಹಿಂ ಗೌಡಳ್ಳಿ, ಜೋಗಿ, ಸಾರಂಬಿ ಸಾಬ್, ಯಾಕೂಬ್ ಸಾಬ್, ಮಹೇಂದ್ರ ನಾಯ್ಕ ಕತಗಾಲ, ಜಿ.ಬಿ.ನಾಯ್ಕ, ಸುಶೀಲಾ ನಾಯ್ಕ ಕಾನೂರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net