

ಶಿರಸಿ: ಅರಣ್ಯ ಹಕ್ಕು ಕಾಯ್ದೆಯಡಿ ಸುಪ್ರೀಂ ಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾವಿರಾರು ಅರಣ್ಯ ಅತಿಕ್ರಮಣದಾರರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಈ ಅರ್ಜಿ ವಿಲೇವಾರಿ ಕಾನೂನು ಬಾಹಿರ ಎಂದು ಆರೋಪಿಸಿ ಆಕ್ಷೇಪಣಾ ಪತ್ರ ಸಲ್ಲಿಸಿದರು.
ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾದ ಕಾವ್ಯರಾಣಿ ಅವರ ಕಚೇರಿಗೆ ಆಗಮಿಸಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.
2024ರ ನವೆಂಬರ್ 28ರಂದು ಮುಖ್ಯ ಕಾರ್ಯದರ್ಶಿ ಸಮಿತಿಯು ರಾಜ್ಯಾದಂತ ವಿವಿಧ ಅರಣ್ಯ ಹಕ್ಕು ಸಮಿತಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನ ಮರು ಪರಿಶೀಲಿಸಲು ನಿರ್ದೇಶನ ನೀಡಿದ್ದಾರೆ. ಅಪೂರ್ಣ, ಅಸ್ತಿತ್ವವಿಲ್ಲದ ಕಾನೂನು ಬಾಹಿರ ಹಕ್ಕು ಸಮಿತಿಗಳಿಂದ ಅರ್ಜಿ ಸಲ್ಲಿಸಲು ಸಮಿತಿಯಲ್ಲಿ ಶೇ. 50ರಷ್ಟು ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಲು ಪ್ರಾರಂಭಿಸಿರುವುದನ್ನು ಆಕ್ಷೇಪದಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ವ್ಯತಿರಿಕ್ತವಾಗಿ ಉಚ್ಛ ನ್ಯಾಯಾಲಯದ ಮತ್ತು ಕೇಂದ್ರ ಸರ್ಕಾರದ ಆದೇಶ ನಿರ್ಲಕ್ಷಿಸಿ ಮೂರು ತಲೆಮಾರಿನ ನಿರ್ದಿಷ್ಟ 1930ರ ಪೂರ್ವದ ದಾಖಲೆಗೆ ಸಾಕ್ಷ್ಯ ಒದಗಿಸಲು ಸಮಿತಿಗಳು ನೋಟಿಸ್ ನೀಡುತ್ತಿರುವುದು ಕಾನೂನು ಬಾಹಿರ ಎಂದು ಆಕ್ಷೇಪ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಮುಂಚಿತವಾಗಿ ತಿಳಿಸಿದ್ದರೂ ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಕಚೇರಿಯಲ್ಲಿ ಇರದಿರುವ ಬಗ್ಗೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿ ಹಾಜರಿರಬೇಕೆಂದು ಅರಣ್ಯವಾಸಿಗಳು ಪಟ್ಟು ಹಿಡಿದ ನಂತರ ತಹಸೀಲ್ದಾರ್ ಶ್ರೀಧರ ಮುಂದಲಮನಿ ಸ್ಥಳಕ್ಕೆ ಆಗಮಿಸಿ ಅರಣ್ಯವಾಸಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ, ಕಾನೂನು ಬಾಹಿರವಾಗಿ ಅರ್ಜಿ ಮರು ಪರಿಶೀಲನೆ ಪ್ರಕ್ರಿಯೆ ಜರುಗುತ್ತಿರುವುದು ವಿಷಾದಕರ. ಸ್ವತಂತ್ರ ಪೂರ್ವದ ವೈಯಕ್ತಿಕ ನಿರ್ದಿಷ್ಟ ದಾಖಲೆಗೆ ಅರಣ್ಯ ಹಕ್ಕು ಸಮಿತಿ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಕಿರಣ ಮರಾಠಿ, ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಹರಿಹರ ನಾಯ್ಕ ಓಂಕಾರ್, ಸೀತಾರಾಮ ಗೌಡ ಹುಕ್ಕಳ್ಳಿ, ಈರಾ ಗೌಡ ನಿಲ್ಕುಂದ, ಸೀತರಾಮ ನಾಯ್ಕ ಕುಂದರಗಿ, ಅನಂತಗೌಡ ಮಾವಿನಮನೆ, ಭಾಸ್ಕರ ಗೌಡ, ಚಂದ್ರು ಪೂಜಾರಿ ಮಂಚಿಕೇರಿ, ಎಂ.ಆರ್. ನಾಯ್ಕ, ರಾಜು ನರೇಬೈಲ್, ರಮೇಶ ಮರಾಠಿ, ಸ್ವಾತಿ ಜೈನ್, ಯಶೋಧಾ ಇತರರು ವಹಿಸಿದ್ದರು.