

ಗುಂಡ್ಲುಪೇಟೆ: ಬಂಡೀಪುರದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿರುವ ಹುಲಿ ಪತ್ತೆ ಮಾಡಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.
ಹೆಣ್ಣು ಹುಲಿಗೆ ಬೇಟೆಯಾಡುವ ಸಾಮರ್ಥ್ಯ ಹಾಗೂ ಕೌಶಲ್ಯಗಳಿಲ್ಲದ 7 ತಿಂಗಳ 4 ಮರಿಗಳು ಇದ್ದು ತಾಯಿಗೇನಾದರೂ ಅಪಾಯವಾದರೆ ಮರಿಗಳು ಅನಾಥವಾಗುವ ಭೀತಿಯಿಂದ ಅರಣ್ಯ ಇಲಾಖೆ ಅದರ ಪತ್ತೆಗೆ ಗಂಭೀರ ಪ್ರಯತ್ನ ಆರಂಭಿಸಿದೆ.
ಬಂಡೀಪುರ ಸಫಾರಿ ರಸ್ತೆಯ ಮೂರ್ಕೆರೆ ಬಳಿ ಆವಾಸಸ್ಥಾನ ಮಾಡಿಕೊಂಡಿರುವ ಹೆಣ್ಣು ಹುಲಿಯನ್ನು ಪ್ರವಾಸಿಗರು ಮೂರ್ಕೆರೆ ಫೀಮೇಲ್ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಸಫಾರಿಗೆ ಹೋಗುವ ಪ್ರವಾಸಿಗರಿಗೆ ತನ್ನ ನಾಲ್ಕು ಮರಿಗಳೊಂದಿಗೆ ಕೆರೆಗಳ ಸಮೀಪ ಕಾಣಿಸಿಕೊಳ್ಳುತ್ತಿತ್ತು. ತನ್ನ ಮರಿಗಳಿಗೆ ಆಹಾರ ಮತ್ತು ಬೇಟೆ ಕೌಶಲ್ಯ ಕಲಿಸಲು ಸಫಾರಿ ವಾಹನಗಳ ಎದುರೇ ಜಿಂಕೆಯನ್ನು ಬೇಟೆಯಾಡಿ ಎಳೆದೊಯ್ದಿದ್ದ ವಿಡಿಯೋವನ್ನು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇತ್ತೀಚೆಗೆ ತಾಯಿಯೊಂದಿಗೆ ಚಿನ್ನಾಟವಾಡುತ್ತಿದ್ದ ಹುಲಿಗಳನ್ನು ಪೊದೆಯಿಂದ ಹೊರಬಂದ ಆನೆಯೊಂದು ಓಡಿಸಿದ ಘಟನೆಯ ವಿಡಿಯೋ ಸಹಾ ವೈರಲ್ ಆಗಿತ್ತು.
ಆದರೆ ಕಳೆದ ಕೆಲವು ದಿನಗಳಿಂದ ಹಿಂಗಾಲಿಗೆ ಪೆಟ್ಟುಬಿದ್ದು ಕುಂಟುತ್ತ ಸಾಗುತ್ತಿದ್ದ ಹುಲಿ ಇತ್ತೀಚೆಗೆ ಕಂಡುಬರುತ್ತಿಲ್ಲ. ಇದು ಅರಣ್ಯ ಇಲಾಖೆ ಹಾಗೂ ಪ್ರವಾಸಿಗರನ್ನು ಆತಂಕಕ್ಕೀಡುಮಾಡಿದೆ. ಅಲ್ಲದೆ ಹುಲಿ ಕುಂಟುತ್ತ ನಡೆಯುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿರುವುದರಿಂದ ಅದರ ಆರೋಗ್ಯದ ಸದ್ಯದ ಸ್ಥಿತಿಯ ಬಗ್ಗೆ ಗಮನಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಆತಂಕ ಏಕೆ?
ಏಳು ತಿಂಗಳ ಮರಿಗಳಿಗೆ ಇನ್ನೂ ಸ್ವತಂತ್ರವಾಗಿ ಬದುಕಲು ಆಗುವುದಿಲ್ಲ. ತಮ್ಮನ್ನು ಇತರ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಜತೆಗೆ ಆಹಾರಕ್ಕಾಗಿ ಬೇಟೆಯಾಡುವ ಕೌಶಲ್ಯ ಕಲಿಯಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷದವರೆಗೆ ತಾಯಿ ಜತೆಗಿರುವುದು ಅನಿವಾರ್ಯ. ಅಕಸ್ಮಾತ್ ತಾಯಿಗೇನಾದರೂ ಆದರೆ ಬೇರೆ ಹುಲಿ ಚಿರತೆಗಳು ಮರಿಗಳನ್ನು ಕೊಲ್ಲುತ್ತವೆ. ಇಲ್ಲವೇ ಇತ್ತೀಚೆಗೆ ಮಹದೇಶ್ವರ ಬೆಟ್ಟದಲ್ಲಿ ಆದಂತೆ ಹಸಿವಿನಿಂದ ಸಾಯುತ್ತವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಾಯಿ ಹುಲಿ ಪತ್ತೆಗೆ ಗಂಭೀರ ಪ್ರಯತ್ನ ಆರಂಭಿಸಿದೆ.
ಸಫಾರಿ ಮಾರ್ಗದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧ:
ಮೂರ್ಕೆರೆ ಫೀಮೇಲ್ ಆವಾಸಸ್ಥಾನ ಸಫಾರಿ ರಸ್ತೆಯೇ ಆಗಿರುವುದರಿಂದ ಹುಲಿ ಪತ್ತೆ ಕಾರ್ಯಾಚರಣೆಗೆ ಅಡಚಣೆಯಾಗದಂತೆ ಅರಣ್ಯ ಇಲಾಖೆ ಸಫಾರಿ ವಾಹನಗಳನ್ನು ಬೇರೆ ರಸ್ತೆಯಲ್ಲಿ ಹೋಗುವಂತೆ ಮಾಡಲಾಗಿದ್ದು, ಬುಧವಾರವೂ ಬೆಳಗಿನಿಂದ ಸಂಜೆಯವರೆಗೂ ಹುಡುಕಾಟ ನಡೆಯಿತು.
ಪಶುವೈದ್ಯರಿಂದ ಹುಡುಕಾಟ
ಮಂಗಳವಾರದಿಂದ ಪಶುವೈದ್ಯರು, ಸಾಕಾನೆಗಳು ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಜತೆಗೆ ಅದರ ಆವಾಸಸ್ಥಾನದಲ್ಲಿ ಹುಡುಕಾಟ ನಡೆಸಿದರೂ ಅದರ ಮರಿಗಳು ಮಾತ್ರ ಕಂಡುಬರುತ್ತಿವೆ. ಇಡೀ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಹಾರಿಸಿ ಪರಿಶೀಲಿಸಿದರೂ ತಾಯಿ ಹುಲಿ ಪತ್ತೆಯಾಗಿಲ್ಲ. ಅದಕ್ಕೆ ಆಗಿರುವ ಗಾಯದ ಮಾಹಿತಿ ಸಿಕ್ಕ ಕೂಡಲೇ ಎನ್‌ಟಿಸಿಎ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಂಡೀಪುರ ವಲಯಾರಣ್ಯಾಧಿಕಾರಿ ಎನ್.ಸಿ.ಮಹದೇವ ತಿಳಿಸಿದ್ದಾರೆ.
ಹಿಂದೆ ಬಂಡೀಪುರದ ರಾಯಭಾರಿ ಎನ್ನಿಸಿಕೊಳ್ಳುತ್ತಿದ್ದ ಪ್ರಿನ್ಸ್ ಹೆಸರಿನ ಗಂಡುಹುಲಿಗೂ ಆಗಾಗ ಕಾದಾಟದಲ್ಲಿ ಗಾಯವಾಗುತ್ತಿತ್ತು. ಗಾಯದ ತೀವ್ರತೆ ಕಡಿಮೆಯಾಗುವವರೆಗೂ ಕೆಲವುದಿನಗಳ ಕಾಲ ಅದು ಹೊರಬರುತ್ತಿರಲಿಲ್ಲ. ಆಗಲೂ ಅರಣ್ಯಾಧಿಕಾರಿಗಳು ಅದಕ್ಕೆ ಹುಡುಕಾಟ ನಡೆಸುತ್ತಿದ್ದರು.