

ಕೆ.ಆರ್.ಸಾಗರ: ಇಲ್ಲಿನ ಚಿಕ್ಕಾಯರಹಳ್ಳಿ ಗ್ರಾಮದ ಬಳಿ ವಿ.ಸಿ. ನಾಲೆಯ ಮಡುವಿನಲ್ಲಿ ಭಾನುವಾರ ಮೊಸಳೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ಮೇ 20ರಂದು ಹಸುಗಳಿಗೆ ನೀರು ಕುಡಿಸಲು ಬಂದಿದ್ದ ವೇಳೆ ರೈತರೊಬ್ಬರ ಕಣ್ಣಿಗೆ ಮೊಸಳೆ ಕಾಣಿಸಿತ್ತು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ 11 ದಿನಗಳ ನಂತರ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
ಪಾಂಡವಪುರ ಅರಣ್ಯ ಇಲಾಖೆ ವಿಭಾಗದ ಆರ್‌ಎಫ್‌ಒ ಜಗದೀಶ್ ಮತ್ತು ಡಿಆರ್‌ಎಫ್‌ಒ ದರ್ಮೇಂದ್ರ ನೇತೃತ್ವದಲ್ಲಿ ಮೈಸೂರು ಮೃಗಾಲಯ ಸಿಬ್ಬಂದಿ ಸಹಾಯದೊಂದಿಗೆ ವಿ.ಸಿ. ನಾಲೆಯ ಮಡುವಿನಲ್ಲಿದ್ದ ಮೊಸಳೆಯನ್ನು ಬಲೆ ಹಾಕಿ ಸೆರೆ ಹಿಡಿದಿದ್ದಾರೆ. ಬಳಿಕ ಮಹದೇವಪುರ ಸಮೀಪದ ಕಾವೇರಿ ನದಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಇದರಿಂದ ಹಲವು ದಿನಗಳಿಂದ ಆತಂಕದಲ್ಲಿದ್ದ ಚಿಕ್ಕಾಯರಹಳ್ಳಿ ಗ್ರಾಮಸ್ಥರು ನಿಟ್ಟಿಸಿರುವ ಬಿಟ್ಟಿದ್ದು, ಮೊಸಳೆ ಹಿಡಿದ ಅರಣ್ಯ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.