

ಗುಂಡ್ಲುಪೇಟೆ: ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದೆ.
ಸೋಮವಾರ ಸಂಜೆ ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಕರಡಿಕಲ್ಲುಗುಡ್ಡಕ್ಕೆ ದುಷ್ಕರ್ಮಿಗಳು ಇಟ್ಟ ಬೆಂಕಿ ನೆರೆಯ ಗೋಪಾಲಸ್ವಾಮಿಬೆಟ್ಟ ವಲಯಕ್ಕೂ ವ್ಯಾಪಿಸಿ ಹಲವಾರು ಹೆಕ್ಟೇರ್ ಪ್ರದೇಶ ಸುಟ್ಟುಹೋಗಿತ್ತು. ಸುಮಾರು 100ಕ್ಕೂ ಹೆಚ್ಚಿನ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಳಗ್ಗೆ 6 ಗಂಟೆ ಸಮಯದಲ್ಲಿ ಬೆಂಕಿ ಹತೋಟಿಗೆ ತಂದಿದ್ದರು. ಸತತ ಮೂರು ವರ್ಷಗಳಿಂದ ಶೂನ್ಯ ಬೆಂಕಿ ಪ್ರಕರಣ ನಿರ್ವಹಿಸಿದ್ದ ಅರಣ್ಯ ಇಲಾಖೆಗೆ ಈ ಘಟನೆ ಆಘಾತವುಂಟು ಮಾಡಿತ್ತು.
ಘಟನೆಯಲ್ಲಿ ಮದ್ದೂರು ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯಗಳ ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿದ್ದರಿಂದ ಎರಡೂ ವಲಯಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಜಂಟಿ ತಂಡ ರಚಿಸಲಾಗಿದೆ. ಈಗಾಗಲೇ ಆರೋಪಿಗಳ ಬಗ್ಗೆ ಸ್ವಲ್ಪ ಮಾಹಿತಿ ದೊರಕಿದ್ದು, ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ ತಿಳಿಸಿದರು.
2021ರಲ್ಲಿಯೂ ಬೆಂಕಿ ಬಿದ್ದಿತ್ತು: ಕೆಲಸದಿಂದ ತೆಗೆದು ಹಾಕಿದಕ್ಕೆ ಅಸಮಾಧಾನಗೊಂಡಿದ್ದ ಕೆಲವು ಫೈರ್ ವಾಚರ್‌ಗಳು 2021ರ ಏಪ್ರಿಲ್ 1ರಂದು ಇದೇ ಕರಡಿಕಲ್ಲು ಗುಡ್ಡಕ್ಕೆ ಬೆಂಕಿಯಿಟ್ಟಿದ್ದರು. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತ್ತು. ಈ ಬಗ್ಗೆಯೂ ಅಂದಿನ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್.ನಟೇಶ್ ಅವರ ಸೂಚನೆ ಮೇರೆಗೆ ಮದ್ದೂರು ವಲಯದ ಆರ್‌ಎಫ್‌ಒ ಸುಧಾಕರ ನಾಯಕ್ ಪ್ರಕರಣ ದಾಖಲಿಸಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.