ಸಾಹಿತ್ಯ ಸಮ್ಮೇಳನದಲ್ಲಿ ವಿದೇಶಿ ಕನ್ನಡಿಗರ ಕಲರವ

Sahithya sammelana
Published on

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದಾರೆ.

ಪು.ತಿ.ನರಸಿಂಹಾಚಾರ್ ಅವರ ಮಗಳು ಅಲಮೇಲು, ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮೊಮ್ಮಗಳು ನಿರ್ಮಲಾ ಕರ್ಪೂರ್, ಕನ್ನಡದ ಮೊಟ್ಟ ಮೊದಲ ಶಬ್ಧಕೋಶದ ಕರ್ತೃ ರ್ಡಿನೆಂಡ್ ಕಿಟಲ್ ಅವರ ವಂಶಸ್ಥರು ಸೇರಿ 18 ದೇಶಗಳ 250ಕ್ಕೂ ಹೆಚ್ಚು ವಿದೇಶಿ ಕನ್ನಡಿಗರು ಸಮ್ಮೇಳನಕ್ಕೆ ಆಗಮಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಅಮೆರಿಕದ ಕನ್ನಡ ಸಂಘ, ಬೆಹರಿನ್ ಕನ್ನಡ ಸಂಘ, ಅಸ್ಟ್ರೇಲಿಯಾದ ಮೆಲ್ಬರ್ನ್ ಕನ್ನಡ ಸಂಘ ಸೇರಿ 21 ವಿದೇಶಿ ಕನ್ನಡಿಗರನ್ನು ಸನ್ಮಾನಿಸಲಾಗುತ್ತಿದ್ದು, ಈ ವೇಳೆ ಚಿಕಾಗೋ ವಿಶ್ವವಿದ್ಯಾಲಯದ ಕನ್ನಡ ಪೀಠವನ್ನು ಗೌರವಿಸಲಾಗುವುದು ಎಂದು ಹೇಳಿದ್ದಾರೆ.

ತ್ರಿವೇಣಿ ಅವರ ಕಾದಂಬರಿ ‘ಶರಪಂಜರ’ವನ್ನು ಇಟಲಿ ನಿವಾಸಿ ಕನ್ನಡತಿ ಜಯಾಮೂರ್ತಿ ಅವರು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದು, ಆ ಕೃತಿ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ. ತ್ರಿವೇಣಿ ಅವರ ಮಗಳು ಮೀರಾ ಶಂಕರ್ ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net