

ಬೇಲೂರು: ತಾಲೂಕಿನ ಅರೇಹಳ್ಳಿ ಸಂತೆಗೆ ಸೇರಿದ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದು ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅರೇಹಳ್ಳಿಯ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅರೇಹಳ್ಳಿ ಪಟ್ಟಣದ ವೀರಯೋಧ ಚಂದ್ರು ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಅಂಬೇಡ್ಕರ್ ವೃತ್ತದ ಮೂಲಕ ಗಣಪತಿ ಪೆಂಡಾಲ್‌ನಲ್ಲಿ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿದ್ದ ಗ್ರಾಮ ಸಭೆಗೆ ತೆರಳಿ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಅಧಿಕಾರಿ, ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ತಹಸೀಲ್ದಾರ್ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಹಿಂದ ಮುಖಂಡ ಅರೇಹಳ್ಳಿ ನಿಂಗರಾಜು ಮಾತನಾಡಿ, ಅರೇಹಳ್ಳಿ ಪಟ್ಟಣದ ಸರ್ವೇ ನಂ.13ರಲ್ಲಿ ಹಿಂದಿನಿಂದಲೂ ವಾರದ ಸಂತೆ ನಡೆಸಿಕೊಂಡು ಬರಲಾಗುತ್ತಿತ್ತು. ಕಾಲ ಕ್ರಮೇಣ ಹಂತ ಹಂತವಾಗಿ ಸಂತೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಜಾಗವನ್ನು ತೆರವು ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸಾರ್ವಜನಿಕರ ಅನುಕೂಲಕ್ಕೆ ಮೀಸಲಿರುವ ಜಾಗ ಉಳಿಸಲೆಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಅಹಿಂದ ಮುಖಂಡ ದಿನೇಶ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ದಯ್ಯನಗರ ರಾಘು, ವೆಂಕಟೇಶ್ ಬ್ಯಾಕರವಳ್ಳಿ, ಪರಮೇಶ್, ಅಣ್ಣಪ್ಪ, ಎಸ್‌ಡಿಪಿಐ ಉಪಾಧ್ಯಕ್ಷ ಇಮ್ರಾನ್, ಅರ್ಷದ್, ಯೂತ್ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಮುಸ್ತಫ, ಕಾಂಗ್ರೆಸ್ ಮುಖಂಡ ಮಂಜು, ಕರವೇ ಪ್ರವೀಣ್ ಶೆಟ್ಟಿ ಬಣದ ಮುಖಂಡ ನಾಗೇಶ್, ಇಬ್ರಾಹಿಂ, ಗೋಪಾಲ್, ಶರಣ್, ಪೂಜಾರಿ, ರವಿ ಇತರರಿದ್ದರು.