ಹಸಿರು ಮೇವಿಗೆ ಲದ್ದಿಹುಳು ಕಾಟ ಹೈನುಗಾರರಿಗೆ ಸಂಕಷ್ಟ

Rmgm-Ph-001-Sainikahulu (Laddi Hulu)-Jola Bele-Story News Photo-Jolabele)-29-10-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜೋಳದ ಬೆಳೆಗೆ ಲದ್ದಿ ಹುಳು ಬಾಧೆ ಕಾಡಿದ್ದು, ಜಾನುವಾರು ಮೇವಿಗೂ ರೈತರು ಪರದಾಡುವಂತಾಗಿದೆ.

ಮುಂಗಾರು ಮಳೆ ಕೊರತೆಯಿಂದಾಗಿ ರಾಗಿ ಸೇರಿ ಹಸಿರು ಮೇವು ಜಿಲ್ಲೆಯಲ್ಲಿ ವಿರಳವಾಗಿದೆ. ಈಗಾಗಲೇ ಮುಸುಕಿನ ಜೋಳ, ನುಚ್ಚು, ಇನ್ನಿತರ ಪಶು ಆಹಾರ ಬೆಲೆ ದುಪ್ಪಟ್ಟಾಗಿದೆ. ನಿಗದಿತ ಹಾಲಿನ ಬೆಲೆ ಸಿಗದೆ ರೈತರು ಹೈರಾಣಾಗಿರುವ ಸಂದರ್ಭದಲ್ಲಿ ಜೋಳ ಬೆಳೆಗೆ ಹುಳು ಬಾಧೆ ತಗುಲಿರುವುದು ಅನ್ನದಾತನನ್ನು ಚಿಂತೆಗೀಡು ಮಾಡಿದೆ.

ರಾಮನಗರ ಜಿಲ್ಲೆ ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು ಹೈನುಗಾರಿಕೆ ರೈತರ ಪ್ರಮುಖ ಕಸುಬಾಗಿದೆ. ಬಿಡದಿ, ಕೂಟಗಲ್​, ಕೈಲಾಂಚ, ಕಸಬಾ ಹೋಬಳಿಯ ಹಲವು ಪ್ರದೇಶಗಳಲ್ಲಿ ಜೋಳ ಬಿತ್ತನೆ ಮಾಡಿರುವ ಜಮೀನಿನಲ್ಲಿ ಮುಸುಕಿನ ಜೋಳಕ್ಕೆ ಲದ್ದಿಹುಳು ಕಾಟ ತಟ್ಟಿದೆ. ಕೀಟಗಳು ಜೋಳದ ಗರಿಗಳನ್ನು ತಿಂದು ಹಾಕುತ್ತಿವೆ. ಸುಳಿ ತಿನ್ನುವುದರಿಂದ ಜೋಳ ಬೆಳೆಯದೆ ಹಳದಿ ಬಣ್ಣಕ್ಕೆ ತಿರುಗಿ ರೋಗಪೀಡಿತವಾಗುವ ಹಸಿರು ಗರಿಗಳನ್ನು ಜಾನುವಾರುಗಳು ತಿನ್ನಲಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೀಟ ನಿಯಂತ್ರಣಕ್ಕೆ ಕೃಷಿ ಇಲಾಖೆ ಔಷಧ ಸಿಂಪಡಣೆ ಮಾಡಿ ಎನ್ನುತ್ತದೆ. ಆದರೆ, ಜೋಳ ಕೇವಲ ಎರಡು ತಿಂಗಳಲ್ಲಿ ಕಟಾವು ಮಾಡಬಹುದಾದ ಬೆಳೆಯಾಗಿದ್ದು, ಔಷಧ ಸಿಂಪಡಿಸಿದರೆ 25ರಿಂದ 30 ದಿನ ಜೋಳ ಕಟಾವು ಮಾಡಲು ಆಗುವುದಿಲ್ಲ.

ಈ ಬಾರಿ ಮಳೆ ಕೊರತೆಯಿಂದಾಗಿ ರಾಗಿ ಬೆಳೆ ಜತೆ ಸಾಲು ಬೆಳೆ ಇಲ್ಲದೆ ಜಾನುವಾರುಗಳಿಗೆ ಹಸಿರು ಮೇವಿನ ಅಭಾವ ಎದುರಾಗಿದೆ. ರೈತರು ಔಷಧ ಸಿಂಪಡಣೆ ನಡೆಸದೆ ಇದ್ದಷ್ಟೇ ಬೆಳೆಯನ್ನು ಕಟಾವು ಮಾಡಿ ರೋಗಪೀಡಿತ ಮೇವನ್ನೇ ಜಾನುವಾರುಗಳಿಗೆ ನೀಡಬೇಕಾಗಿದೆ ಎನ್ನುತ್ತಾರೆ ಬನ್ನಿಕುಪ್ಪೆ ಗ್ರಾಮದ ರೈತ ಮಧುಸೂಧನ್​.

ಹತೋಟಿ ಕ್ರಮ

ಬಿತ್ತನೆ ಮಾಡಿದ 40-50 ದಿನಗಳಲ್ಲಿ ಹಸಿರಾದ ಗರಿ ಸುಳಿ ತಿನ್ನಲು ಲದ್ದಿ ಹುಳುಗಳು ಬರುತ್ತವೆ. ಕೂತ ಜಾಗದಲ್ಲಿ ಆಹಾರ ತಿಂದು ಹಿಕ್ಕೆ ಹಾಕಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ಮರಿಗಳಾಗಿ ಮತ್ತಷ್ಟು ಬೆಳೆ ನಾಶವಾಗುತ್ತದೆ. ಗರಿಯಲ್ಲಿ ಹುಳು ಪ್ರಾಥಮಿಕ ಹಂತದಲ್ಲಿ ಕಂಡಾಗಲೇ ಎಮಾಮೆಕ್ಟಿನ್​ ಬೆಂಜೋಯೇಟ್​ ಕೀಟನಾಶಕ ಸಿಂಪಡಣೆ ಮಾಡಬೇಕು.

ಪ್ರತಿ 10 ಲೀಟರ್​ ನೀರಿಗೆ 4 ಗ್ರಾಂ. ಔಷಧ ಬೆರಸಿ ಸಿಂಪಡಣೆ ಮಾಡಬೇಕು ನಂತರ 25-30 ದಿನ ಬಿಟ್ಟು ಜಾನುವಾರುಗಳಿಗೆ ಮೇವು ಹಾಕಬೇಕು. ಪ್ರಾಥಮಿಕ ಹಂತದಲ್ಲಿ ಮೊಟ್ಟೆ ಕಂಡ ಗರಿಗಳನ್ನು ಜಾನುವಾರುಗಳಿಗೆ ತಿನ್ನಿಸದೆ ಅಂತಹ ಗರಿಗಳನ್ನು ಬೆಂಕಿಯಲ್ಲಿ ಸುಡಬೇಕು. ಇದರಿಂದ ಕೀಟಗಳ ಬೆಳವಣಿಗೆ ಕುಂಠಿತವಾಗಿ ಫಸಲು ರಸಿಕೊಳ್ಳಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಈ ವರ್ಷ ಮುಂಗಾರು ಕೈಕೊಟ್ಟ ಕಾರಣ ಹಸಿರು ಮೇವಿನ ಕೊರತೆ ಉಂಟಾಗಿದೆ. ಲದ್ದಿಹುಳು ಬಾಧೆ ಕಾಣಿಸಿಕೊಂಡು ಮೇವಿನ ಜೋಳ ಹಾನಿಯಾಗಿದೆ. ಫಸಲು ಕೈಸೇರದೆ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ರೋಗ ಹತೋಟಿಗೆ ಉಚಿತ ಔಷಧದ ಜತೆಗೆ ಸಂಸ್ಕರಿಸಿದ ಔಷಧಗಳಿಂದ ಬೀಜೋಪಚಾರ ಮಾಡಿದ ಜೋಳದ ಬಿತ್ತನೆ ಕಾಳುಗಳನ್ನು ಮುಂದಿನ ಬಿತ್ತನೆಗಾಗಿ ಸರ್ಕಾರ ನೀಡಬೇಕು.

 ಜಿ.ವಿ. ನಾಗರಾಜು, ವಿಎಸ್​ಎಸ್​ಎನ್​ ಅಧ್ಯಕ್ಷ, ಕೈಲಾಂಚ

ಔಷಧೋಪಚಾರ ಮಾಡಿದ ಬಿತ್ತನೆ ಬೀಜವನ್ನೇ ಬಳಸಬೇಕು. ಇಲ್ಲದಿದ್ದರೆ ಲದ್ದಿಹುಳು ಬಾಧೆ ತೀವ್ರತರವಾಗಿ ಕಾಡುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಒಂದೆರಡು ಗರಿಗಳಲ್ಲಿ ಕಂಡುಬರುತ್ತದೆ. ಅಂತಹ ಸಮಯದಲ್ಲಿ ರೈತರು ಹುಳು ಕಂಡ ಗರಿಗಳನ್ನು ತೆಗೆದು ಜಮೀನಿನಿಂದ ದೂರದಲ್ಲಿ ಸುಡಬೇಕು. ನಂತರ ಔಷಧ ಸಿಂಪಡಣೆ ನಡೆಸಿದರೆ ಹುಳುಬಾಧೆ ತಪ್ಪಿಸಬಹುದು. ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸರ್ಕಾರದ ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ.

 ಪ್ರದಿಪ್​, ಕೃಷಿ ಅಧಿಕಾರಿ, ಕೈಲಾಂಚ ರೈತ ಸಂಪರ್ಕ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net