

ಸವದತ್ತಿ: ಪಟ್ಟಣದಲ್ಲಿ ಸುಗಮ ಸಂಚಾರ, ಸೌಂದರ್ಯಿರಿಕರಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಹೀಗಾಗಿ, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಇಲ್ಲಿನ ಶಾಸಕರ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮಳಿಗೆ ಕಳೆದುಕೊಂಡ ವ್ಯಾಪಾರಸ್ಥರಿಗೆ ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಈ ರಸ್ತೆ ಸಿಂಧನೂರು&ಹೆಮ್ಮಡಗ ರಾಜ್ಯ ಹೆದ್ದಾರಿಯಾಗಿದ್ದು, 15 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಹಾಗೂ ಅಲಂಕಾರಿಕ ದೀಪ ಅಳವಡಿಕೆ ಮೂಲಕ ಸುಗಮ ಸಂಚಾರಕ್ಕೆ ಅನುಕೂಲಚವಾಗಲಿದೆ ಎಂದರು.
ಇಲ್ಲಿನ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು. ಪಟ್ಟಣಕ್ಕೆ ಅಗತ್ಯವಾಗಿರುವ ಒಳ ಚರಂಡಿ ಯೋಜನೆ ಕಾಮಗಾರಿ ತ್ವರಿತವಾಗಿ ಆರಂಭವಾಗಲಿದೆ. 92 ಕೋಟಿ ರೂ.ವೆಚ್ಚದ 24್ಡ7 ಕುಡಿಯುವ ನೀರಿನ ಯೋಜನೆ ಏ.10ರೊಳಗೆ ಮನೆ ಮನೆಗೆ ಲಭ್ಯವಾಗಲಿದ್ದು, ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಪಿಡಬ್ಲ್ಯುಡಿ ಎಇಇ ವಿಜಯ ಸಂಗಪ್ಪಗೋಳ, ಹೆಸ್ಕಾಂ ಎಇಇ ಮಹೇಂದ್ರ ವಿಶಾಪೂರಕರ, ಶಿವಾನಂದ ಹೂಗಾರ, ಚಂದ್ರು ಶ್ಯಾಮರಾಯನವರ, ಬಸವರಾಜ ಪ್ರಭುನವರ ಇತರರಿದ್ದರು.