ಹಿರಿಯ ಜೀವಗಳನ್ನು ಗೌರವದಿಂದ ಕಾಣಿ

bkt-26-5
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಚಾಲನೆ ನೀಡಿದರು
Published on

ಬಾಗಲಕೋಟೆ: ಹಿರಿಯರು ನಮ್ಮ ಬದುಕಿನ ಆಸ್ತಿ ಇದ್ದಂತೆ. ಅವರಿಂದಲೇ ನಾವು ಎನ್ನುವುದು ಅರಿತುಕೊಳ್ಳಬೇಕು. ಪ್ರತಿ ಕ್ಷಣವು ಹಿರಿಯ ಜೀವಗಳನ್ನು ಗೌರವದಿಂದ ಕಾಣುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಹೇಳಿದರು.

ನಗರದ ಅಂಬೇಡ್ಕರ ಭವನದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ಜೀವಿಗಳನ್ನು ಗೌರವದಿಂದ ಕಾಣುವ ಮೂಲಕ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕಾನೂನು ನೆರವು ಬೇಕಾಗಿದ್ದಲ್ಲಿ ಉಚಿತವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್., ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿರಿಯ ನಾಗರಿಕರು ಇಷ್ಟೊಂದು ಉತ್ಸುಕತೆಯಿಂದ ಸೇರಿರುವುದು ಸಂತಸವಾಗಿದೆ. ಶಕ್ತಿ ಮೀರಿ ಆಟಗಳನ್ನು ಆಡಬಾರದು. ನಿಮಗೆ ಸಾಧ್ಯವಾಗುವ ಆಟಗಳನ್ನು ಮಾತ್ರ ಆಡುವಂತೆ ಸಲಹೆ ನೀಡಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಹಿರಿಯ ಜೀವಿಗಳು ಉತ್ಸುಕತೆಯಿಂದ ಇರುವಂತೆ ಮಾಡುವ ಉದ್ದೇಶದಿಂದ ಸರ್ಕಾರ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ. ಸಕ್ರಿಯವಾಗಿ ಎಲ್ಲರು ಭಾಗವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಷಣ್ಮುಕಪ್ಪ ಹದ್ಲಿ, ಎಸ್.ಎನ್.ಹೂಗಾರ ಸೇರಿದಂತೆ ಆಯಾ ತಾಲೂಕಿನ ಎಂ.ಆರ್.ಡಬ್ಲೂ, ವಿವಿಧ ಸ್ಪರ್ಧೆಗಳ ನಿರ್ಣಾಯಕರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು. ನಂತರ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿ ಸ್ಪರ್ಧೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net