

ಗುಡಿಬಂಡೆ: ತಾಲೂಕಿನ ಹನುಮಂತಪುರ ಗ್ರಾಮದ ಬಳಿ ಇರುವ ಕಲ್ಲು ಕ್ವಾರಿಯಿಂದ ಅತಿ ಭಾರ ಹೊತ್ತು ಸಾಗುವ ಟ್ರಕ್‌ಗಳಿಂದಾಗಿ ರಸ್ತೆ ಹದಗೆಟ್ಟು ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸದೇ ಮೌನವಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಹೌದು, ತಾಲೂಕಿನ ಹನುಮಂತಪುರ ಮತ್ತು ಚಿಕ್ಕತಮ್ಮನಹಳ್ಳಿ ಕ್ರಾಸ್‌ನಲ್ಲಿ ಕಲ್ಲು ಕ್ವಾರಿಯಿಂದ ಬರುವ ಭಾರಿ ವಾಹನಗಳಿಂದ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ಆದರೆ, ಇದಕ್ಕೆ ತಡೆಯೊಡ್ಡುವವರೇ ಇಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಕಲ್ಲು ಕ್ವಾರಿಗಳಲ್ಲಿ ಸಂಜೆ ಸಮಯದಲ್ಲಿ ಹೆಚ್ಚು ಬ್ಲಾಸ್ಟಿಂಗ್ ಮಾಡುತ್ತಿದ್ದು, ಇದರಿಂದ ಮನೆಗಳೂ ಬಿರುಕು ಬಿಡುತ್ತಿವೆ. ಜತೆಗೆ ಕ್ವಾರಿಗಳ ಪಕ್ಕದಲ್ಲಿರುವ ರೈತರ ಜಮೀನಿಗಳಿಗೂ ಕಲ್ಲು, ಧೂಳು ಆವರಿಸುತ್ತಿದ್ದು ಬೆಳೆ ನಾಶವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅಪಘಾತ ಸ್ಥಳವಾಗಿ ಮಾರ್ಪಾಡು
ಕಲ್ಲು ಕ್ವಾರಿ ರಸ್ತೆಯಿಂದ ಹನುಮಂತಪುರ ಕ್ರಾಸ್ ಬಳಿ ಮುಖ್ಯರಸ್ತೆಗೆ ತಿರುವು ಪಡೆಯುವ ಸ್ಥಳದಲ್ಲಿ ರಸ್ತೆ ಗುಂಡಿಮಯವಾಗಿದ್ದು, ಗುಡಿಬಂಡೆಯಿಂದ ಬೀಚಗಾನಹಳ್ಳಿ ಕಡೆಗೆ ಚಲಿಸುವ ವಾಹನ ಸವಾರರು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ಕಾರಿನ ಚಾಲಕ ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು.
ಮನವಿ ಸ್ಪಂದನೆಯಿಲ್ಲ
ಗ್ರಾಮಕ್ಕೆ ಇರುವುದು ಮಣ್ಣಿನ ರಸ್ತೆ. ಮಳೆ ಬಂದರೆ ಗದ್ದೆಯಾಗುತ್ತದೆ. ಅಂತಹುದರಲ್ಲಿ ಭಾರಿ ಭಾರ ಹೊತ್ತ ಕ್ವಾರಿ ಟಿಪ್ಪರ್‌ಗಳು ಸಾಗುವುದರಿಂದ ರಸ್ತೆ ಮತ್ತಷ್ಟು ಹದೆಗಟ್ಟು ಪಾದಚಾರಿಗಳ ಸಂಚಾರಕ್ಕೂ ಸಮಸ್ಯೆಯಾಗಿದೆ. ತಹಸೀಲ್ದಾರ್ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.
ಮಿತಿಮೀರಿದ ಬ್ಲಾಸ್ಟಿಂಗ್
ಗ್ರಾಮದ ಪಕ್ಕದಲ್ಲೇ ಕ್ವಾರಿಗಳಿದ್ದು, ಮಿತಿಮೀರಿದ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಮನೆಗಳು ಬಿರುಕು ಬಿಡುತ್ತಿವೆ. ಬ್ಲಾಸ್ಟಿಂಗ್ ಮಾಡಿದಾಗ ಏಳುವ ಧೂಳು ಮನೆಗಳ ಒಳಗಡೆ ಬರುತ್ತದೆ. ಜತೆಗೆ ಗಬ್ಬುವಾಸನೆ ಬೀರುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕೆಂದು ಹನುಮಂತಪುರ ಗ್ರಾಮದ ಮೂರ್ತಿ, ರಾಮಪ್ಪ, ಮಂಜುನಾಥ್, ವೆಂಕಟೇಶ್ ಹಾಗೂ ಚಿಕ್ಕತಮ್ಮಹಳ್ಳಿ ಗ್ರಾಮದ ವೇಣು, ನಾಗರಾಜ, ನರಸಿಂಹಪ್ಪ, ಶಂಕರ್ ಮತ್ತಿತರರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ಬೆಂಬಲ
ತಾಲೂಕಿನ ಕೆಲ ಅಧಿಕಾರಿಗಳು ಕ್ವಾರಿಗಳ ಮಾಲೀಕರಿಗೆ ಬೆಂಬಲವಾಗಿ ನಿಂತಿದ್ದು, ಒಂದು ವೇಳೆ ಗ್ರಾಮಸ್ಥರು ಪ್ರಶ್ನೆ ಮಾಡಿದರೆ ನಿಮ್ಮ ಮೇಲೆ ದೂರುಗಳನ್ನು ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಆದ್ದರಿಂದ ಭಯಪಟ್ಟು ಪ್ರಶ್ನೆ ಮಾಡುವುದನ್ನೇ ನಿಲ್ಲಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಕಲ್ಲು ಕ್ವಾರಿಗಳಿಂದ ಮೀತಿಮೀರಿದ ತೂಕ ಹೊತ್ತು ಸಾಗುವ ಟಿಪ್ಪರ್‌ಗಳಿಂದ ಮುಖ್ಯರಸ್ತೆ ಹದಗೆಟ್ಟಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಕ್ವಾರಿ ಮಾಲೀಕರ ವಿರುದ್ಧ ದೂರು ನೀಡಲಾಗುವುದು ಹಾಗೂ ಅವರಿಂದಲೇ ರಸ್ತೆ ದುರಸ್ತಿ ಮಾಡಿಸಲಾಗುವುದು. ಪ್ರದೀಪ್, ಎಇಇ, ಲೋಕೋಪಯೋಗಿ ಇಲಾಖೆ, ಬಾಗೇಪಲ್ಲಿ ಪ್ರತಿದಿನ ಕಲ್ಲು ಕ್ವಾರಿಯಿಂದ ಭಾರಹೊತ್ತು ಟಿಪ್ಪರ್‌ಗಳು ಚಲಿಸುತ್ತವೆ. ಇದರಿಂದ ರಸ್ತೆ ಹದಗೆಟ್ಟಿದೆ. ವಿಶೇಷವಾಗಿ ಹನುಮಂತಪುರ ಕ್ರಾಸ್‌ನಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಲ್ಲು ಕ್ವಾರಿ ಮಾಲೀಕರ ವಿರುದ್ದ ದೂರು ನೀಡಬೇಕು. ಮಂಜುನಾಥ್, ಗುಡಿಬಂಡೆ